ADVERTISEMENT

‘ಮಹಾ ಸಂಪರ್ಕ’: ಮನೆ ಮನೆಗೆ ಡಿವಿಎಸ್‌

ವಿಜಯಕುಮಾರ್ ಸಿಗರನಹಳ್ಳಿ
Published 14 ಏಪ್ರಿಲ್ 2019, 20:11 IST
Last Updated 14 ಏಪ್ರಿಲ್ 2019, 20:11 IST
ಡಿ.ವಿ. ಸದಾನಂದಗೌಡ ಅವರು ಸದಾಶಿವನಗರದಲ್ಲಿ ರಾಜಸ್ಥಾನ ಮೂಲದ ನಿವಾಸಿಗಳ ಜೊತೆ ಸಭೆ ನಡೆಸಿದರು. ಶಾಸಕ ಅಶ್ವತ್ಥನಾರಾಯಣ, ರಾಜಸ್ಥಾನದ ಸಚಿವೆ ಕಿರಣ್ ಮಹೇಶ್ವರಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ವಿಧಾನ ಪರಿಷತ್ತಿನ ಸದಸ್ಯ ಲೆಹರ್ ಸಿಂಗ್ ಇದ್ದರು –ಪ್ರಜಾವಾಣಿ ಚಿತ್ರ
ಡಿ.ವಿ. ಸದಾನಂದಗೌಡ ಅವರು ಸದಾಶಿವನಗರದಲ್ಲಿ ರಾಜಸ್ಥಾನ ಮೂಲದ ನಿವಾಸಿಗಳ ಜೊತೆ ಸಭೆ ನಡೆಸಿದರು. ಶಾಸಕ ಅಶ್ವತ್ಥನಾರಾಯಣ, ರಾಜಸ್ಥಾನದ ಸಚಿವೆ ಕಿರಣ್ ಮಹೇಶ್ವರಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ವಿಧಾನ ಪರಿಷತ್ತಿನ ಸದಸ್ಯ ಲೆಹರ್ ಸಿಂಗ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಾಮಾನ್ಯವಾಗಿ ಬೆಳಿಗ್ಗೆ 5.30ಕ್ಕೆ ಏಳುವ ಡಿ.ವಿ.ಸದಾನಂದ ಗೌಡ, ವ್ಯಾಯಾಮ ಮಾಡಿ ಬಳಿಕ ತಾವೇ ಟೀ ಸಿದ್ಧಪಡಿಸಿಕೊಂಡು ಕುಡಿಯುವುದು ಅಭ್ಯಾಸ. ಭಾನುವಾರವೂ ಇವೆಲ್ಲ ಕಾರ್ಯಗಳನ್ನು ಮುಗಿಸಿ ಬೆಳಿಗ್ಗೆ 6.30ಕ್ಕೆ ಮನೆಯಿಂದ ಹೊರಟರು. ರಜೆ ಮೂಡ್‌ನಲ್ಲಿದ್ದ ಜನರನ್ನು ಏಳಿಸಿ ಮತ ಕೇಳುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯು ನಗುಮೊಗದೊಂದಿಗೆ ಮನೆಯ ಬಾಗಿಲು ತಟ್ಟುತ್ತಿದ್ದಂತೆಯೇ ಬಹುತೇಕ ಮಂದಿ ಕಣ್ಣು ಉಜ್ಜಿಕೊಂಡೇ ಬಾಗಿಲು ತೆರೆದರು. ಮನೆಗೆ ಬಂದ ಕೇಂದ್ರ ಸಚಿವರನ್ನು ಕಂಡು ಸಣ್ಣ ನಗು ಬೀರಿ ಬರಮಾಡಿಕೊಂಡರು. ಸದಾನಂದ ಗೌಡ ಅವರ ಪತ್ನಿ, ಮಗ ಮತ್ತು ಸೊಸೆ ಕೂಡ ಮತ ಯಾತ್ರೆಯಲ್ಲಿ ಜತೆಯಾದರು. ಬಿಜೆಪಿಯ ಕೆಲ ಕಾರ್ಯಕರ್ತರೂ ಸೇರಿಕೊಂಡರು.

ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಮಹಾ ಸಂಪರ್ಕ ರ‍್ಯಾಲಿಯ ಭಾಗವಾಗಿ ತಮ್ಮ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮನೆಗಳಿಗೆ ಭೇಟಿ ನೀಡಿದರು. ಬೆಳಿಗ್ಗೆ 9 ಗಂಟೆ ವೇಳೆಗೆ 110ಕ್ಕೂ ಹೆಚ್ಚು ಮನೆಗಳಿಗೆ ಕರಪತ್ರಗಳನ್ನು ನೀಡಿ ಮತ ಯಾಚಿಸಿದರು.‌‌

ADVERTISEMENT

ಪ್ರಚಾರದ ನಡುವೆ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದರು. ‘ಕೇಂದ್ರ ಸರ್ಕಾರದ ಯೋಜನೆಯಡಿ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮಗಳಿಗೆ ಆ ಕ್ಷೇತ್ರದ ಶಾಸಕರಾಗಿರುವ ಕೃಷ್ಣ ಬೈರೇಗೌಡ ಗೈರಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ನಾನು ಈ ಕ್ಷೇತ್ರದಿಂದ ದೂರವಾಗಿಲ್ಲ. ಇದು ಈ ಕ್ಷೇತ್ರದ ಜನರಿಗೂ ಗೊತ್ತಿದೆ’ ಎಂದು ಹೇಳಿದರು.

ಬಳಿಕ 9.30ರ ವೇಳೆಗೆ ನಾಗಶೆಟ್ಟಿಹಳ್ಳಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ, 9.45ರ ವೇಳೆಗೆ ಮನೆಗೆ ಬಂದರು. ಅಲ್ಲಿದ್ದ ಕೆಲ ಕಾರ್ಯಕರ್ತರೊಂದಿಗೆ ಚರ್ಚಿಸುತ್ತಲೇ ಉಪಾಹಾರ ಸೇವಿಸಿದರು. ಅಲ್ಲಿಂದ ನೇರವಾಗಿ ಯಶವಂತಪುರಕ್ಕೆ ತೆರಳಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಲ್ಲೇಶ್ವರ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಜತೆಗಿದ್ದರು. ಅಷ್ಟೊತ್ತಿಗೆ 11 ಗಂಟೆ ದಾಟಿತ್ತು.

ಅಲ್ಲಿಂದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಡೆಗೆ ಸಚಿವರ ಪ್ರಯಾಣ ಮುಂದುವರಿಯಿತು. ಬಾಗಲೂರಿನಲ್ಲಿ ಕಾರ್ಯಕರ್ತರನ್ನು ಭೇಟಿಯಾದರು.ಬಿಸಿಲ ಬೇಗೆಗೆ ದಣಿಸಿದ್ದ ಅವರು ಚಂದ್ರಣ್ಣ ಎಂಬುವರ ಮನೆಗೆ ತೆರಳಿ ನೀರು ಕುಡಿದರು. ನೀರಿನ ಜತೆಗೆ ಮತವನ್ನೂ ಕೋರಿದರು.

ಅಲ್ಲಿಂದ ಕಾರು ಹತ್ತಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕಡೆಗೆ ಹೊರಟರು. ಎಚ್.ಎ.ಎಲ್‌. ಬಡಾವಣೆಯ ರಮೇಶನಗರದಲ್ಲಿ ಕಾದಿದ್ದ ಕಾರ್ಯಕರ್ತರೊಂದಿಗೆ ರೋಡ್‌ ಶೋ ನಡೆಸಿದರು.

ಪುಲಿಕೇಶಿನಗರ ಹಾಗೂ ಕಂಠೀರವನಗರಗಳಲ್ಲಿ ಪ್ರಚಾರ ನಡೆಸಿ ಮಹಾಲಕ್ಷ್ಮೀ ಲೇಔಟ್‌ಗೆ ತೆರಳಿದರು. ಅಲ್ಲಿ ರೋಡ್‌ ಶೋ ನಡೆಸಿ ಮತ ಯಾಚಿಸಿದರು.

ಸಂಜೆ 6ರ ವೇಳೆಗೆ ಸದಾಶಿವನಗರಕ್ಕೆ ಬಂದರು. ಅಲ್ಲಿ ರಾಜಸ್ಥಾನ ಮೂಲದ 500ಕ್ಕೂ ಹೆಚ್ಚು ಮಂದಿ ಸಭೆ ಸೇರಿದ್ದರು. ಅವರಲ್ಲಿ ಬೆಂಬಲ ಕೋರಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಜತೆಗೆ ರಾತ್ರಿ ರೋಡ್ ಶೋ ನಡೆಸುವ ಮೂಲಕ ಭಾನುವಾರದ ಪ್ರಚಾರ ಮುಗಿಸಿದರು.

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಸದಾನಂದಗೌಡ ಪ್ರಚಾರದ ನಡುವೆ ಅಲ್ಲಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದರು.

ಯಶವಂತಪುರ, ಪುಲಿಕೇಶಿನಗರ ಮತ್ತು ಕಂಠೀರವನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ‘ಅಂಬೇಡ್ಕರ್ ಈ ದೇಶದ ದೊಡ್ಡ ಆಸ್ತಿ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.