ADVERTISEMENT

ಇನ್ನೂ ನಿಲ್ಲದ ‘ನೋಟು ಬದಲಾವಣೆ ದಂಧೆ’

ದರೋಡೆ ದೂರು ನೀಡಿ ಸಿಕ್ಕಿಬಿದ್ದ ಆರೋಪಿ l ₹90 ಲಕ್ಷ ಹಳೇ ನೋಟು ಜಪ್ತಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:25 IST
Last Updated 30 ಮಾರ್ಚ್ 2019, 19:25 IST
   

ಬೆಂಗಳೂರು: ಹಳೇ ನೋಟುಗಳನ್ನು ಬದಲಾವಣೆ ಮಾಡಿಕೊಡುವ ನೆಪದಲ್ಲಿ ಜನರಿಗೆ ವಂಚಿಸುವ ದಂಧೆ ನಗರದಲ್ಲಿ ಇನ್ನೂ ನಡೆಯುತ್ತಿದ್ದು, ಇಂಥ ಜಾಲದಲ್ಲಿದ್ದ ಯುವತಿ ಸೇರಿದಂತೆ ಆರು ಮಂದಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯಗರದ ನಿವಾಸಿ ರೇವತಿ, ವಿನೋದ್‌ ಕುಮಾರ್, ರಾಕೇಶ್, ರವಿ ಅಲಿಯಾಸ್ ರವೀಂದ್ರ, ರೇಣುಕಾ ಪ್ರಸಾದ್‌ ಹಾಗೂ ಬಸವರಾಜ್ ಬಂಧಿತರು.

₹500 ಹಾಗೂ ₹1000 ಮುಖಬೆಲೆಯ ₹90 ಲಕ್ಷ ಮೌಲ್ಯದ ಹಳೇ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ADVERTISEMENT

‘ಹಳೇ ನೋಟು ಇಟ್ಟುಕೊಂಡವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ನೋಟು ಬದಲಾವಣೆ ಮಾಡಿಕೊಡುವುದಾಗಿ ಹೇಳಿ ನಂಬಿಸುತ್ತಿದ್ದರು. ಆರೋಪಿಗಳನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ. ಅವರು ಯಾರ‍್ಯಾರ ಕಡೆಯಿಂದ ನೋಟು ಪಡೆದು ವಂಚಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದರು.

ದರೋಡೆ ದೂರು ಕೊಟ್ಟು ಸಿಕ್ಕಿಬಿದ್ದರು: ‘ಹಳೇ ನೋಟು ಬದಲಾವಣೆ ಸಂಬಂಧ ಆರೋಪಿಗಳ ನಡುವೆ ವೈಮನಸ್ಸು ಮೂಡಿತ್ತು. ಆರೋಪಿ ರೇವತಿ, ದರೋಡೆ ಆರೋಪದಡಿಸಹಚರರಾದ ವಿನೋದ್ ಕುಮಾರ್ ಹಾಗೂ ರಾಕೇಶ್ ವಿರುದ್ಧ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ದೂರಿನ ಅಂಶಗಳು ಸುಳ್ಳು ಎಂಬುದು ತಿಳಿಯಿತು‌’ ಎಂದು ಪೊಲೀಸರು ತಿಳಿಸಿದರು.

‘ವಿನೋದ್‌ಕುಮಾರ್ ಎಂಬಾತನ ಮೂಲಕ ಪರಿಚಯವಾಗಿದ್ದ ರಾಕೇಶ್, ನನ್ನಸ್ನೇಹಿತ ಸಂತೋಷ್‌ ಕುಮಾರ್ ಅವರ ತಂಗಿಗೆ‌ ರಾಮಯ್ಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿದ್ದ. ₹13 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡಲು ಮಾರ್ಚ್‌ 26ರಂದು ಐಐಎಸ್ಸಿ ಬಳಿ ಹೋದಾಗ ಆರೋಪಿಗಳು ಹಣ ಕಿತ್ತುಕೊಂಡು ಹೋಗಿದ್ದರು’ ಎಂದು ರೇವತಿ ದೂರಿದ್ದರು. ವಿನೋದ್‌ಕುಮಾರ್ ಹಾಗೂ ರಾಕೇಶ್‌ನನ್ನು ವಶಕ್ಕೆ ಪಡೆದಾಗ ರೇವತಿಯೇ ಆರೋಪಿ ಎಂಬುದು ಗೊತ್ತಾಯಿತು’ ಎಂದು ಹೇಳಿದರು.

ಆರೋಪಿ ಮನೆಯಲ್ಲಿದ್ದ ₹90 ಲಕ್ಷ:‘ಆರೋಪಿ ರೇವತಿ, ದಾಸರಹಳ್ಳಿಯ ರವೀಂದ್ರ ಎಂಬುವರ ಬಳಿ ಹಳೇ ನೋಟುಗಳನ್ನು ಪಡೆದುಕೊಂಡು ಬಂದು ವಿನೋದ್‌ ಕುಮಾರ್ ಹಾಗೂ ರಾಕೇಶ್‌ಗೆ ನೀಡಿದ್ದರು.

ಅವರು ಹೊಸ ನೋಟು ಕೊಟ್ಟಿರಲಿಲ್ಲ. ಹೀಗಾಗಿ ಅವರಿಬ್ಬರ ವಿರುದ್ಧ ಸುಳ್ಳು ದೂರು ನೀಡಿದ್ದರು. ರವೀಂದ್ರ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ₹90 ಲಕ್ಷ ಮೌಲ್ಯದ ಹಳೇ ನೋಟುಗಳು ಸಿಕ್ಕವು’ ಎಂದರು.

ಶೇ 75ರಷ್ಟು ಕಮಿಷನ್

‘ಆರೋಪಿಗಳು ಚೆನ್ನೈನಲ್ಲಿರುವ ವ್ಯಕ್ತಿಯೊಬ್ಬರಿಗೆ ಶೇ 75ರಷ್ಟು ಕಮಿಷನ್ ಕೊಟ್ಟು ಹಳೇ ನೋಟುಗಳನ್ನು ಬದಲಾವಣೆ ಮಾಡಿಸುತ್ತಿದ್ದರು ಎಂಬ ಮಾಹಿತಿ ಇದೆ. ಆ ವ್ಯಕ್ತಿ ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡ ಚೆನ್ನೈಗೆ ಹೋಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.