
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಅವರಿಗೆ ಪೌರಕಾರ್ಮಿಕರು ಮನವಿ ಸಲ್ಲಿಸಿದರು
ಬೆಂಗಳೂರು: ಪೌರಕಾರ್ಮಿಕರು, ಕಸ ಸಂಗ್ರಹಿಸುವ ಆಟೊ ಟಿಪ್ಪರ್ ಚಾಲಕರು, ಸಹಾಯಕರಿಗೆ ಸಕಾಲದಲ್ಲಿ ವೇತನ ನೀಡದೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಸೂಚಿಸಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಮತ್ತು ಲೋಡರ್ಸ್, ಕ್ಲೀನರ್ಸ್ ಮತ್ತು ಡ್ರೈವರ್ಸ್ ಅವರೊಂದಿಗೆ ಶುಕ್ರವಾರ ಗೋವಿಂದರಾಜನಗರದಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ನಡೆದ ನೇರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ನೀಡುವಲ್ಲಿ ಹಲವಾರು ತಾಂತ್ರಿಕ ತಪ್ಪುಗಳು, ಜನ್ಮದಿನಾಂಕ, ಜನ್ಮಸ್ಥಳ ತಪ್ಪು ನಮೂದು ಮತ್ತು ಸಿಂಧುತ್ವ ಇರದೇ ವಿಳಂಬವಾಗುತ್ತಿದೆ ಎಂದು ಪೌರಕಾರ್ಮಿಕರಾದ ಆಂಜಿನಮ್ಮ ದೂರಿದರು.
ಪಾಲಿಕೆ ವತಿಯಿಂದ ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ವಿಶೇಷ ಶಿಬಿರ ಆಯೋಜಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು. ಜನ್ಮದಿನಾಂಕದ ತಪ್ಪುಗಳನ್ನು ಸರಿಪಡಿಸಲಾಗುವುದು ಎಂದು ಪಾಲಿಕೆಯ ಆಯುಕ್ತ ಕೆ.ವಿ. ರಾಜೇಂದ್ರ ಭರವಸೆ ನೀಡಿದರು.
ಪೌರಕಾರ್ಮಿಕರಿಂದ ನಿಯಮಬಾಹಿರವಾಗಿ ಕಸ ವಿಂಗಡಣೆ ಮಾಡಿಸುವ ಕೆಲಸ ಮಾಡಿಸಲಾಗುತ್ತಿದೆ. ನಿರಾಕರಿಸಿದರೆ ಕೆಲಸದಿಂದ ಹೊರಹಾಕಲಾಗುವುದು ಎಂದು ಬೆದರಿಕೆ ಒಡ್ಡಲಾಗುತ್ತಿದೆ ಎಂದು ಕಾರ್ಮಿಕರು ಆಯೋಗದ ಗಮನಕ್ಕೆ ತಂದರು. ಮೇಲ್ವಿಚಾರಕರಿಗೆ ಆಯುಕ್ತರು ಎಚ್ಚರಿಕೆ ನೀಡಿದರು.
ನಗರದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರಿಗೆ ಸಾರ್ವಜನಿಕರಿಂದ ದೈಹಿಕ ಹಲ್ಲೆ ಹಾಗೂ ಬೈಗುಳ ಅನುಭವಿಸುವ ಕೆಲವು ಪ್ರಕರಣಗಳು ಕಂಡುಬಂದಿದ್ದು ಹಿರಿಯ ಅಧಿಕಾರಿಗಳು ಸಕಾಲದಲ್ಲಿ ನೆರವಿಗೆ ಬರಬೇಕು, ಪೌರಕಾರ್ಮಿಕರಿಗೆ ರಕ್ಷಣೆ ಒದಗಿಸಬೇಕು ಎಂದು ಆಯೋಗದ ಅಧ್ಯಕ್ಷರು ತಿಳಿಸಿದರು.
ಪಶ್ಚಿಮ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ದಿಗ್ವಿಜಯ್ ಬೋಡ್ಕೆ, ಆಯೋಗದ ಕಾರ್ಯದರ್ಶಿ ಸುಮಯ್ಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.