ADVERTISEMENT

ಮಹಿಳೆಯರ ನೆರವಿಗೆ ‘ಸೇಫ್ಟಿ ಐಲ್ಯಾಂಡ್‌’

ರಾಜಧಾನಿಯ 30 ಸ್ಥಳಗಳಲ್ಲಿ ಸ್ಥಾಪನೆ, ಬಟನ್‌ ಒತ್ತಿದ ತಕ್ಷಣವೇ ಸ್ಥಳಕ್ಕೆ ಬರುವ ಪೊಲೀಸರು

ಪ್ರಜಾವಾಣಿ ವಿಶೇಷ
Published 20 ಜೂನ್ 2023, 22:17 IST
Last Updated 20 ಜೂನ್ 2023, 22:17 IST
ಬೆಂಗಳೂರಿನಲ್ಲಿ ಸ್ಥಾಪಿಸಿರುವ ‘ಸುರಕ್ಷತಾ ದ್ವೀಪ’.
ಬೆಂಗಳೂರಿನಲ್ಲಿ ಸ್ಥಾಪಿಸಿರುವ ‘ಸುರಕ್ಷತಾ ದ್ವೀಪ’.   

–ಆದಿತ್ಯ ಕೆ.ಎ.

ಬೆಂಗಳೂರು: ‘ಸೇಫ್‌ ಸಿಟಿ’ ಯೋಜನೆ ಅಡಿ ನಗರದಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಸುರಕ್ಷತೆಗೆ ಹಲವು ಯೋಜನೆಗಳು ಜಾರಿಗೊಳ್ಳುತ್ತಿದ್ದು ಈಗ 30 ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ‘ಸುರಕ್ಷತಾ ದ್ವೀಪ’ (ಸೇಫ್ಟಿ ಐಲ್ಯಾಂಡ್‌) ಸ್ಥಾಪಿಸಲಾಗಿದೆ. ಇದು ಮಹಿಳೆಯರ ನೆರವಿಗೆ ಬರುವ ಪೊಲೀಸರ ವಿನೂತನ ವ್ಯವಸ್ಥೆಯಾಗಿದೆ.

ನಗರದ ಕಮಿಷನರೇಟ್‌ ವ್ಯಾಪ್ತಿಯಲ್ಲಿ 50 ‘ಸುರಕ್ಷತಾ ದ್ವೀಪ’ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಮೊದಲ ಹಂತದಲ್ಲಿ ಮಹಿಳೆಯರು ಹೆಚ್ಚಾಗಿ ಸಂಚರಿಸುವ, ಸಾಫ್ಟ್‌ವೇರ್ ಕಂಪನಿಗಳಿರುವ ಹಾಗೂ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟ 30 ಸ್ಥಳಗಳಲ್ಲಿ ಈ ದ್ವೀಪಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ ನಗರ ಪೊಲೀಸರು ಇನ್ನೊಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ. 8 ವಿಭಾಗದಲ್ಲೂ ಈ ದ್ವೀಪಗಳು ತಲೆಯೆತ್ತಿವೆ.

ADVERTISEMENT

ನಿರ್ಭಯಾ ಪ್ರಕರಣದ ನಂತರ ದೇಶದ ಮಹಾನಗರಗಳಲ್ಲಿ ಮಹಿಳೆಯರ ಸುರಕ್ಷತೆಗೆ ತಂತ್ರಜ್ಞಾನ ಬಳಸಿಕೊಂಡು ಆರೋಪಿಗಳ ಪತ್ತೆ, ಕಾನೂನು ನೆರವು, ವೈದ್ಯಕೀಯ ಸೇವೆ ಕಲ್ಪಿಸಲು ಹಲವು ಯೋಜನೆ ರೂಪಿಸಲಾಗುತ್ತಿದೆ. ನಿರ್ಭಯಾ ನಿಧಿಯಿಂದಲೇ ಈ ಸುರಕ್ಷತಾ ದ್ವೀಪ ಸ್ಥಾಪಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಯಂತ್ರದ ವಿಶೇಷ ಏನು?:
ರಸ್ತೆ ಬದಿ, ಮೆಟ್ರೊ ನಿಲ್ದಾಣದ ಆಸುಪಾಸಿನಲ್ಲಿ ನೀಲಿ ಬಣ್ಣದ 10ರಿಂದ 12 ಅಡಿ ಎತ್ತರದ ಯಂತ್ರವನ್ನು ಅಳವಡಿಸಲಾಗಿದೆ. ಅದರ ಮಧ್ಯ ಭಾಗದಲ್ಲಿ ಕೆಂಪು ಬಣ್ಣದ ಬಟನ್‌ ನೀಡಲಾಗಿದೆ. ಮಹಿಳೆಯರು ಅಪಾಯಕ್ಕೆ ಸಿಲುಕಿದ್ದರೆ ತಕ್ಷಣವೇ ಆ ಯಂತ್ರದ ಬಳಿಗೆ ತೆರಳಿ ಬಟನ್‌ ಒತ್ತಿದರೆ ಸಾಕು. ಅಲರಾಂನೊಂದಿಗೆ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಿರುವ ‘ಕಮಾಂಡೊ ಸೆಂಟರ್‌’ಗೆ ದೃಶ್ಯ ಸಹಿತ ಮಾಹಿತಿ ರವಾನೆ ಆಗಲಿದೆ. ಅಲ್ಲಿ 24 ಗಂಟೆಯೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರೆ ಸ್ವೀಕರಿಸಿದ ಸಿಬ್ಬಂದಿ ಆಕೆಯನ್ನು ವಿಚಾರಿಸುತ್ತಾರೆ. ಆಕೆ ದೌರ್ಜನ್ಯಕ್ಕೆ ಒಳಗಾಗಿದ್ದರೆ ಸಮೀಪದಲ್ಲಿರುವ ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕಳುಹಿಸುತ್ತಾರೆ. ಅಲ್ಲಿಗೆ ಬಂದ ಪೊಲೀಸ್‌ ಸಿಬ್ಬಂದಿಗೆ ಮಹಿಳೆಗೆ ನೆರವಾಗುತ್ತಾರೆ.

ಎಲ್ಲ ಸುರಕ್ಷತಾ ದ್ವೀಪದ ಪಕ್ಕದಲ್ಲೇ ಸಿಸಿ ಟಿ.ವಿ ಕ್ಯಾಮೆರಾ ಸಹ ಅಳವಡಿಸಲಾಗಿದೆ. ಸಂತ್ರಸ್ತರ ಸ್ಥಿತಿಯನ್ನು ಕಮಾಂಡೊ ಕೇಂದ್ರದಲ್ಲೇ ವೀಕ್ಷಣೆ ಮಾಡಲಾಗುತ್ತದೆ. ‌

‘ನಗರವು ವಿಶಾಲವಾಗಿ ಬೆಳೆದಿದೆ. ಎಲ್ಲವನ್ನೂ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡುವುದು ಕಷ್ಟ. ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಂಡು ಆರೋಪಿಗಳ ಪತ್ತೆ ಚುರುಕುಗೊಳಿಸಲಾಗಿದೆ. ಒಂದು ವೇಳೆ ಮಹಿಳೆಯ ಮೊಬೈಲ್‌ ಅನ್ನು ಆರೋಪಿ ಕಸಿದುಕೊಂಡಿದ್ದರೆ ಆಕೆಗೆ ಪೊಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ದ್ವೀಪದ ಬಳಿಗೆ ತೆರಳಿ ಬಟನ್‌ ಒತ್ತಬೇಕು. ನಾವು ಸ್ಥಳಕ್ಕೆ ತೆರಳಿ ಸಂತ್ರಸ್ತೆಯನ್ನು ಸಲಹಾ ಕೇಂದ್ರಕ್ಕೆ ಕರೆದೊಯ್ದು ಆಪ್ತ ಸಮಾಲೋಚನೆ ಮಾಡುತ್ತೇವೆ’ ಎಂದು ಪೊಲೀಸರು ಹೇಳುತ್ತಾರೆ.

‘ಸದ್ಯ ಜಾರಿಯಲ್ಲಿರುವ 112ಕ್ಕೂ ಕರೆ ಮಾಡಬಹುದು. ಸೈಬರ್‌ ಅಪರಾಧಕ್ಕೆ ಒಳಪಟ್ಟಲ್ಲಿ 1930ಕ್ಕೆ ಕರೆ ಮಾಡಬಹುದು. ಆಗಲೂ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸುತ್ತೇವೆ’ ಎಂದು ಕಮಾಂಡೊ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ.

ಬೆಂಗಳೂರಿನಲ್ಲಿ ಸ್ಥಾಪಿಸಿರುವ ‘ಸುರಕ್ಷತಾ ದ್ವೀಪ’ವನ್ನು ಪೊಲೀಸ್‌ ಅಧಿಕಾರಿಯೊಬ್ಬರು ಪರಿಶೀಲಿಸಿದರು.
ರಾಜಧಾನಿಯ ಮಹಿಳೆಯರು ಮಕ್ಕಳ ಸುರಕ್ಷತೆಗೆ ನಾವಿದ್ದೇವೆ. ಎಂತಹ ತುರ್ತು ಸಂದರ್ಭದಲ್ಲೂ ಧೃತಿಗೆಡದೇ ಯಂತ್ರದ ಬಳಿಗೆ ತೆರಳಿ ಬಟನ್‌ ಒತ್ತಿದರೆ ಸಾಕು.
–ಬಿ.ದಯಾನಂದ್ ಬೆಂಗಳೂರು ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.