ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಭೂಗಳ್ಳರ ಪಾಲಾಗಿದ್ದ ಯಶವಂತಪುರ ಹೋಬಳಿ ಸಜ್ಜೆಪಾಳ್ಯದ 44 ಎಕರೆ 33 ಗುಂಟೆ ಜಮೀನು ರಂಗಮ್ಮ ಅವರ ಹೆಸರಿಗೆ ಬಂದಿದೆ ಎಂದು ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಚ್.ಎನ್. ಅಶೋಕ (ತಮ್ಮಾಜಿ) ತಿಳಿಸಿದರು.
ಕೃಷ್ಣಪ್ಪ–ರಂಗಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಕೃಷ್ಣಪ್ಪ ಅವರು ನಿಧನರಾದ ಬಳಿಕ ರಂಗಮ್ಮ ಅವರು ಸಮಾಜಕ್ಕಾಗಿ ಜಮೀನು ನೀಡಿದ್ದರು. ಅವರು ಐದು ದಶಕಗಳ ಹಿಂದೆ ನಿಧನರಾಗಿದ್ದು, ಆ ನಂತರ ಆ ಜಮೀನಿಗೆ ಸಂಬಂಧಪಡದವರು ದಾಖಲೆಗಳಲ್ಲಿ ಅವರ ಹೆಸರನ್ನು ಸೇರಿಸಿದ್ದರು. ಅದಕ್ಕೆ ಆಗಿನ ಅಧಿಕಾರಿಗಳು ಸಹಕಾರ ನೀಡಿದ್ದರು. ಒಕ್ಕಲಿಗರ ಸಂಘದ ಬೆಂಬಲದೊಂದಿಗೆ ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್ ಇದರ ವಿರುದ್ಧ ಹೋರಾಟ ಮಾಡುತ್ತಾ ಬಂದಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಹಣಿಯಲ್ಲಿರುವ ಎಲ್ಲರ ಹೆಸರು ತೆಗೆದು ರಂಗಮ್ಮನ ಹೆಸರು ಮಾತ್ರ ದಾಖಲು ಮಾಡಿ. ಆ ನಂತರ ಯಾರಿಗೆ ಸೇರಿದ್ದು ಎಂಬುದನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ನ್ಯಾಯಾಲಯ ಆದೇಶಿಸಿತ್ತು. ಈಗ ರಂಗಮ್ಮ ಅವರ ಹೆಸರಿಗೆ ಪಹಣಿ ಬಂದಿದೆ. ಇದು ಹೋರಾಟಕ್ಕೆ ಸಂದ ಆರಂಭಿಕ ಜಯ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಕೆಂಚಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪ ರೆಡ್ಡಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.