ಜಿಬಿಎ
ಬೆಂಗಳೂರು: ಗ್ರೇಟರ್ ಬೆಂಗಳೂರು ಹಾಗೂ ಐದು ನಗರ ಪಾಲಿಕೆಗಳ ಸಿಬ್ಬಂದಿಗೆ ಸೆಪ್ಟೆಂಬರ್ ವೇತನ ಪಾವತಿಯಾಗಿಲ್ಲ.
ಸೆಪ್ಟೆಂಬರ್ 2 ರಂದು ಬಿಬಿಎಂಪಿ ವಿಸರ್ಜನೆಯಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಯಿತು. ಐದು ನಗರ ಪಾಲಿಕೆಗಳೂ ಅಸ್ತಿತ್ವಕ್ಕೆ ಬಂದವು. ಇದನ್ನು ಅರಿತಿದ್ದ ಬಿಬಿಎಂಪಿ ಅಧಿಕಾರಿಗಳು ಆಗಸ್ಟ್ ವೇತನವನ್ನು ಆ ತಿಂಗಳ ಕೊನೆಯ ವಾರದಲ್ಲೇ ಪಾವತಿಸಿದ್ದರು. ಆದರೆ ಜಿಬಿಎ, ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದು ಒಂದು ತಿಂಗಳಾದರೂ ಸೆಪ್ಟೆಂಬರ್ ವೇತನವನ್ನು ಅಕ್ಟೋಬರ್ 4ಕ್ಕಾದರೂ ಪಾವತಿಸಿಲ್ಲ.
ತುರ್ತು ನಿರ್ವಹಣೆ, ಸಿಬ್ಬಂದಿ ವೇತನಕ್ಕೆ ನಗರ ಪಾಲಿಕೆಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದರು. ಈ ಹಿಂದಿನ ವರ್ಷಗಳಲ್ಲಿ ಆಯುಧಪೂಜೆ ಸಂದರ್ಭದಲ್ಲಿ ಸಿಬ್ಬಂದಿಗೆ ಮುಂಗಡ, ಬೇಗ ವೇತನ ಪಾವತಿಸುವ ಪ್ರಕ್ರಿಯೆ ಇತ್ತು. ಆದರೆ ಈ ಬಾರಿ ಆಯುಧಪೂಜೆ, ವಿಜಯ ದಶಮಿ ಮುಗಿದು ಹೋಗಿದ್ದರೂ ವೇತನ ಪಾವತಿಸಿಲ್ಲ ಎಂದು ಸಿಬ್ಬಂದಿ ದೂರಿದರು.
‘ಪಾಲಿಕೆಯ ಹಿಂದಿನ 10 ವರ್ಷಗಳಲ್ಲಿ ಎಂದು ನೌಕರರಿಗೆ ಇಂತಹ ದಯನೀಯ ಸ್ಥಿತಿ ಎದುರಾಗಿರಲಿಲ್ಲ. ಸೆಪ್ಟೆಂಬರ್ 2 ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದೆ. ಈ ದಿನದವರೆಗೂ ಸೆಪ್ಟೆಂಬರ್ ವೇತನವನ್ನು ಪಾವತಿಸಲು ಕ್ರಮವಹಿಸಿಲ್ಲ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ, ನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ತಿಳಿಸಿದರು.
‘ಈ ಮಧ್ಯೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ರ ಕಾರ್ಯಕ್ಕೆ ನಗರ ಪಾಲಿಕೆಗಳ ಬಿ ಮತ್ತು ಸಿ ದರ್ಜೆಯ ಸಿಬ್ಬಂದಿಯನ್ನು ನಿಯೋಜಿಸಿದ್ದು ಪಾಲಿಕೆ ಯಾವ ಕಚೇರಿಯಲ್ಲೂ ಸಹ ವೇತನ ಬಿಲ್ಲನ್ನು ತಯಾರಿಸಲಾಗಿಲ್ಲ. ಆ ಬಿಲ್ಲನ್ನು ಪಾವತಿಸುವ ಬಗ್ಗೆ ಕ್ರಮ ವಹಿಸಲು ಲೆಕ್ಕ ಶಾಖೆಯಲ್ಲಿ ಸಿಬ್ಬಂದಿ ಇರುವುದಿಲ್ಲ. ಅವರೆಲ್ಲ ಚುನಾವಣೆ ಕರ್ತವ್ಯ, ಸಮೀಕ್ಷೆ ಕೆಲಸ ಕಾರ್ಯಗಳು ಮತ್ತು ಇತರೆ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ’ ಎಂದರು.
‘ನಾವೆಲ್ಲ ಇನ್ನು ಮುಂದೆ ಸಹ ಅದೇ ರೀತಿ ಕರ್ತವ್ಯ ನಿರ್ವಹಿಸುತ್ತೇವೆ. ಆದರೆ, ಬೆಂಗಳೂರಿನಂತಹ ಒಂದು ದೊಡ್ಡ ನಗರದಲ್ಲಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದೆ ಇದ್ದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದಯಮಾಡಿ ಪಾಲಿಕೆ ಉನ್ನತ ಅಧಿಕಾರಿಗಳು ಈ ವಿಷಯದ ಬಗ್ಗೆ ಗಮನಹರಿಸಿ ಸೆಪ್ಟೆಂಬರ್ ವೇತನವನ್ನು ತ್ವರಿತವಾಗಿ ಪಾವತಿಸಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.