
ರೂಮಿ ಹರೀಶ್
ಬೆಂಗಳೂರು: ‘ಲಿಂಗತ್ವಅಲ್ಪಸಂಖ್ಯಾತನಾಗಿ ಬದಲಾದಾಗ ಎರಡು ವರ್ಷ ಹಾಡಲು ಆಗಲಿಲ್ಲ. ಧ್ವನಿಯಲ್ಲಿ ಬದಲಾವಣೆ, ಖಿನ್ನತೆ ಸೇರಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು’ ಎಂದು ಸಂಗೀತಗಾರರಾದ ರೂಮಿ ಹರೀಶ್ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ ‘ಹೊಸ ತಲೆಮಾರಿನ ಸಂಗೀತ: ಶಬ್ದದೊಳಗಣ ನಿಶ್ಯಬ್ಧದತ್ತ ಪಯಣ’ಕುರಿತು ಮಾತನಾಡಿದರು.
‘ಹೆಣ್ಣು ಗಂಡಾಗಿ ಬದಲಾಗಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಧ್ವನಿಯಲ್ಲಿ ಬದಲಾವಣೆ ಆಗುತ್ತದೆ ಎಂಬುದು ಗೊತ್ತಿತ್ತು. ಆದರೆ, ದೊಡ್ಡ ಮಟ್ಟದಲ್ಲಿ ಏರಿಳಿತವಾಗುತ್ತದೆ ಅಂದುಕೊಂಡಿರಲಿಲ್ಲ. ಇದರಿಂದ ಹಾಡಲು ತೊಂದರೆ ಆಯಿತು. ಮಾನಸಿಕ ಖಿನ್ನತೆಗೆ ಒಳಗಾಗಿ, ಸಮಸ್ಯೆಯಿಂದ ಹೊರ ಬರಲು ಪರದಾಡಿದೆ. ಹಲವರ ಬಳಿ ಈ ವಿಷಯ ಚರ್ಚಿಸಿದರೂ ಪರಿಹಾರ ಸಿಕ್ಕಿರಲಿಲ್ಲ’ ಎಂದರು.
‘ಪಂಡಿತ್ ರಾಜೀವ್ ತಾರಾನಾಥ್ ಅವರು ಒಡನಾಟಕ್ಕೆ ಬಂದ ಬಳಿಕ ನನ್ನಲ್ಲಿ ಬದಲಾವಣೆ ಕಂಡುಕೊಂಡೆ. ರಾಜೀವ್ ಅವರೇ ಕರೆ ಮಾಡಿ ನನ್ನ ಧ್ವನಿಯ ಬಗ್ಗೆ ಚರ್ಚಿಸಿದರು. ಸಂಗೀತದಿಂದಲೇ ಪರಿಹಾರ ದೊರೆಯಿತು’ ಎಂದು ನುಡಿದರು.
‘ನಾನು ಖಾಯಲ್ ಹಾಗೂ ಠುಮ್ರಿ ಹೊರತುಪಡಿಸಿ ಬೇರೆ ಹಾಡುವುದಿಲ್ಲ. ನಾನು ಹಾಡದಿದ್ದರೆ ಜಗತ್ತು ಮುಳುಗುತ್ತಿರಲಿಲ್ಲ. ಆದರೆ, ನನಗೆ ತೊಂದರೆ ಆಯಿತು. ಖಿನ್ನತೆಗೆ ಒಳಗಾದೆ, ಪೇಂಟಿಂಗ್ ಮಾಡಿದರೂ ಸರಿಯಾಗಲಿಲ್ಲ. ಸಾಕಷ್ಟು ಸವಾಲುಗಳ ನಡುವೆ ಹಾಡಲು ನಿರ್ಧರಿಸಿದೆ. ಸಂಗೀತದಿಂದಲೇ ಪರಿಹಾರ ಸಿಕ್ಕಿತು’ ಎಂದು ತಿಳಿಸಿದರು.
ಗಾಯಕಿ ಎಂ.ಡಿ.ಪಲ್ಲವಿ ಮಾತನಾಡಿ, ‘ಸುಗಮ ಸಂಗೀತದಲ್ಲಿ ಹಾಡುವ ಭಾವಗೀತೆಗಳು ನನ್ನ ಜೀವನದ ಒಂದು ಭಾಗ. ಗಾಯಕರಾದ ಅನಂತಸ್ವಾಮಿ ಮತ್ತು ಅಶ್ವಥ್ ಅವರು ಸಂಗೀತದಲ್ಲಿ ಸಾಕಷ್ಟು ಪ್ರಯೋಗ ಮಾಡಿದರು. ಆದರೆ ನಾನು ಸಂಗೀತದಲ್ಲಿ ಪ್ರಯೋಗ ಮಾಡಿದಾಗ ಆರಂಭದಲ್ಲಿ ವಿರೋಧ ವ್ಯಕ್ತವಾಯಿತು. ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾಗ ವೇದಿಕೆ ಬಳಿ ಬಂದು ಕೂಗಾಡಿದ್ದರು’ ಎಂದು ನೆನಪಿಸಿಕೊಂಡರು.
ಪತ್ರಕರ್ತ ಎಸ್.ಆರ್.ರಾಮಕೃಷ್ಣ ಮಾತನಾಡಿ, ‘ಹೊಸ ತಲೆಮಾರಿನವರು ಒಂದೇ ರೀತಿಯ ಯೋಚನೆ ಮಾಡುತ್ತಾರೆ. ಒಂದೇ ತರಹದ ಸಂಗೀತ ಕೇಳುತ್ತಾರೆ ಮತ್ತು ಸಿನಿಮಾ ನೋಡುತ್ತಾರೆ ಎಂಬುದು ಸುಳ್ಳು. ಅವರಲ್ಲೂ ಸಾಕಷ್ಟು ವೈವಿಧ್ಯತೆ ಇರುತ್ತದೆ. ಬೆಂಗಳೂರಿನಲ್ಲಿ ಇದ್ದರೆ ಕೇಳುವ ಸಂಗೀತವೇ ಬೇರೆ, ನ್ಯೂಯಾರ್ಕ್‌ನಲ್ಲಿ ಕೇಳುವ ಸಂಗೀತ ಹಾಗೂ ಮುಂಬೈನಲ್ಲಿ ಇದ್ದಾಗ ಕೇಳುವ ಸಂಗೀತವೇ ಬೇರೆ’ ಎಂದರು ವಿಶ್ಲೇಷಿಸಿದರು.
ಶಶಿಧರ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.