ADVERTISEMENT

ಯಲಹಂಕ: ಸಂಪಿಗೇಹಳ್ಳಿ-ಚೊಕ್ಕನಹಳ್ಳಿ ಮುಖ್ಯರಸ್ತೆ ಗುಂಡಿಮಯ

ಯಲಹಂಕ ಡಿ.ಸುರೇಶ್‌
Published 19 ಫೆಬ್ರುವರಿ 2025, 23:58 IST
Last Updated 19 ಫೆಬ್ರುವರಿ 2025, 23:58 IST
ಸಂಪಿಗೇಹಳ್ಳಿ ವೃತ್ತದಲ್ಲಿ ರಸ್ತೆ ಹಾಳಾಗಿರುವ ಪರಿಣಾಮ, ವಾಹನಸವಾರರು ತೊಂದರೆ ಅನುಭವಿಸಬೇಕಾಗಿದೆ.
ಸಂಪಿಗೇಹಳ್ಳಿ ವೃತ್ತದಲ್ಲಿ ರಸ್ತೆ ಹಾಳಾಗಿರುವ ಪರಿಣಾಮ, ವಾಹನಸವಾರರು ತೊಂದರೆ ಅನುಭವಿಸಬೇಕಾಗಿದೆ.   

ಯಲಹಂಕ: ಜಕ್ಕೂರು-ಸಂಪಿಗೇಹಳ್ಳಿ ಮುಖ್ಯರಸ್ತೆಯ ಜಕ್ಕೂರು ಕೆರೆ ಕೋಡಿಯಿಂದ ಚೊಕ್ಕನಹಳ್ಳಿ ಮಾರ್ಗವಾಗಿ ಹೆಗಡೆನಗರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳಾಗಿದ್ದು, ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಸವಾರರು ತೀವ್ರತೊಂದರೆ ಅನುಭವಿಸಬೇಕಾಗಿದೆ.

ಈ ರಸ್ತೆಯು ಯಲಹಂಕ-ಜಕ್ಕೂರು ಮಾರ್ಗವಾಗಿ ಸಂಪಿಗೇಹಳ್ಳಿ, ಚೊಕ್ಕನಹಳ್ಳಿ, ಅಗ್ರಹಾರ, ಕೋಗಿಲು, ಅಗ್ರಹಾರ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿರುವುದರಿಂದ ವಾಹನಸವಾರರು ಈ ರಸ್ತೆಯಲ್ಲಿ ಸಂಚರಿಸಲು ತೀವ್ರ ಪ್ರಯಾಸ ಪಡಬೇಕಾಗಿದೆ ಎಂಬುದು ಸ್ಥಳೀಯರ ಆರೋಪ.

ಈಗಾಗಲೇ ಹಲವು ಮಂದಿ ದ್ವಿಚಕ್ರ ವಾಹನಸವಾರರು ಬಿದ್ದು ಗಾಯಗೊಂಡಿದ್ದಾರೆ. ಇತ್ತೀಚೆಗೆ ಸುರಿದಿದ್ದ ಭಾರಿ ಮಳೆಯಿಂದ ರಸ್ತೆಯು ತೀರಾ ಹಾಳಾಗಿದೆ. ರಾತ್ರಿ ವೇಳೆಯಲ್ಲಂತೂ ಗುಂಡಿಗಳು ಕಾಣದೆ ವಾಹನಸವಾರರು ಆತಂಕದಿಂದ ಈ ರಸ್ತೆಯಲ್ಲಿ ಸಾಗುತ್ತಿದ್ದಾರೆ. ಸಂಪಿಗೇಹಳ್ಳಿ ವೃತ್ತವೂ ಗುಂಡಿಗಳಿಂದ ಕೂಡಿದ್ದು, ರಸ್ತೆಯು ಕಿತ್ತುಹೋಗಿದೆ. ಇದರಿಂದ ಈ ಸ್ಥಳದಲ್ಲಿ ವಾಹನಗಳು ತಿರುವು ಪಡೆಯುವ ಸಂದರ್ಭದಲ್ಲಿ ಅಪಘಾತಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸ್ಥಳೀಯ ನಿವಾಸಿ ಅಜಯ್‌ಕುಮಾರ್‌ ದೂರಿದರು.

ADVERTISEMENT

ವಾಹನಗಳ ಸಂಚಾರದಿಂದ ಉಂಟಾಗುವ ದೂಳು ಕಿರಿಕಿರಿ ಉಂಟು ಮಾಡುತ್ತಿದೆ. ರಸ್ತೆಯ ಅಕ್ಕಪಕ್ಕದ ಅಂಗಡಿಗಳು ಮತ್ತು ಮನೆಗಳ ಹೊರಗೆ, ಒಳಗೆ ದೂಳಿನ ಮಜ್ಜನ. ಇದರಿಂದ ಸ್ಥಳೀಯ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸಬೇಕಾಗಿದೆ. ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲುಗಳು ವಾಹನಗಳ ಚಕ್ರಗಳಿಗೆ ಸಿಲುಕಿ ಮೇಲೆ ಹಾರುವುದರಿಂದ ವಾಹನಗಳಿಗೂ ಹಾನಿಯಾಗುತ್ತಿದೆ ಎಂದು ಅವರು ದೂರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿ, ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶೀಘ್ರ ಕಾಮಗಾರಿ ಆರಂಭ

ಚೊಕ್ಕನಹಳ್ಳಿ ರಸ್ತೆಯಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಸಂಪಿಗೇಹಳ್ಳಿಯಿಂದ ಚೊಕ್ಕನಹಳ್ಳಿ ಮುಖ್ಯರಸ್ತೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಟೆಂಡರ್‌ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. -ಮಾಲತೇಶ್‌ ಸಹಾಯಕ ಎಂಜಿನಿಯರ್‌ ಬಿಬಿಎಂಪಿ ಬ್ಯಾಟರಾಯನಪುರ ಉಪವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.