
ಬೆಂಗಳೂರು: ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ 2025ನೇ ಸಾಲಿನ ‘ಸಂಸ್ಕೃತಿ ಸಿರಿ’ ಪ್ರಶಸ್ತಿಗೆ ಸುಗಮ ಸಂಗೀತ ಕಲಾವಿದ ಗರ್ತಿಕೆರೆ ರಾಘಣ್ಣ ಸೇರಿ ಐವರು ಆಯ್ಕೆಯಾಗಿದ್ದಾರೆ.
ಕ್ಲಾರಿಯೊನೆಟ್ ಕಲಾವಿದ ನರಸಿಂಹಲು ವಡವಾಟಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ರಂಗ ನಿರ್ದೇಶಕ ಟಿ.ಎಸ್. ನಾಗಾಭರಣ ಹಾಗೂ ಲೇಖಕಿ ಕೆ.ಆರ್. ಸಂಧ್ಯಾ ರೆಡ್ಡಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ 14ರಂದು ಬೆಳಿಗ್ಗೆ 11.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವೇಮಗಲ್ ನಾರಾಯಣಸ್ವಾಮಿ ತಿಳಿಸಿದ್ದಾರೆ.