ADVERTISEMENT

ಸಾಮಾಜಿಕ ಸಮಸ್ಯೆಗಳಿಗೆ ಸಂವಿಧಾನದಿಂದ ಪರಿಹಾರ: ಎಚ್‌.ಎನ್‌.ನಾಗಮೋಹನದಾಸ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 19:59 IST
Last Updated 27 ನವೆಂಬರ್ 2025, 19:59 IST
ಸಂವಿಧಾನ ಓದು ಸಂಘಟನೆ ಆಯೋಜಿಸಿದ್ದ ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನ್ಯಾ. ನಾಗಮೋಹನದಾಸ್‌ ಅವರು ಬಹುಮಾನ ವಿತರಿಸಿದರು.
ಸಂವಿಧಾನ ಓದು ಸಂಘಟನೆ ಆಯೋಜಿಸಿದ್ದ ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನ್ಯಾ. ನಾಗಮೋಹನದಾಸ್‌ ಅವರು ಬಹುಮಾನ ವಿತರಿಸಿದರು.   

ಬೆಂಗಳೂರು: ‘ಭಾರತವನ್ನು ಕಾಡುತ್ತಿರುವ ಹಲವಾರು ಜ್ವಲಂತ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸಂವಿಧಾನದ ಹಾದಿಯಲ್ಲಿ ಹೋಗುವುದರಿಂದ ಪರಿಹಾರ ಕಂಡುಕೊಳ್ಳಬಹುದು’ ಎಂದು ನಿವೃತ್ತ ನ್ಯಾ. ಎಚ್‌.ಎನ್‌.ನಾಗಮೋಹನದಾಸ್‌ ಹೇಳಿದರು.

ಸಂವಿಧಾನ ಓದು ಅಭಿಯಾನ–ಕರ್ನಾಟಕ ಸಂಘಟನೆಯು ನಗರದ ಸರ್ಕಾರಿ ಕಲಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಕುರಿತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದ ನಂತರ ಭಾರತ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ನೋಡಿದ್ದೇವೆ. ಹೀಗಿದ್ದರೂ ನಮ್ಮಲ್ಲಿ ಹಲವಾರು ಸಮಸ್ಯೆಗಳಿವೆ. ಹಸಿವಿನಿಂದ ಬಳಲುತ್ತಿರುವ ಜನರೂ ಇದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗ ಎಲ್ಲರಿಗೂ ಸಿಗುತ್ತಿಲ್ಲ. ವಸತಿರಹಿತರೂ ಇದ್ದಾರೆ. ‌ಭಯೋತ್ಪಾದನೆ, ಕೋಮುವಾದ, ಅಪರಾಧೀಕರಣ, ಭ್ರಷ್ಟಾಚಾರ, ಸಾಂಸ್ಕೃತಿಕ ದಿವಾಳಿತನವೂ ನಮ್ಮನ್ನು ಕಾಡುತ್ತಿದೆ. ಇವುಗಳಿಗೆಲ್ಲಾ ಸಂವಿಧಾನದ ಹಾದಿ ಪರಿಹಾರ ಆಗಬಲ್ಲದು’ ಎಂದರು.

ADVERTISEMENT

‘2018ರಲ್ಲಿ ಸಂವಿಧಾನ ಓದು ಪುಸ್ತಕವನ್ನು ಪ್ರಕಟಿಸಲಾಯಿತು. ಈವರೆಗೂ ಲಕ್ಷಗಟ್ಟಲೇ ಪುಸ್ತಕಗಳು ಜನರನ್ನು ತಲುಪಿವೆ. ಹಿಂದಿ, ಮಲೆಯಾಳ, ತೆಲುಗಿಗೆ ಇದು ಭಾಷಾಂತರಗೊಂಡಿದೆ. ತಮಿಳು, ಉರ್ದು, ಮರಾಠಿಗೂ ಭಾಷಾಂತರ ಆಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಸಂವಿಧಾನದ ಸಂಪನ್ಮೂಲ ವ್ಯಕ್ತಿಗಳನ್ನು ತಯಾರು ಮಾಡಲು ಕಾರ್ಯಾಗಾರ ನಡೆಸಲಾಗುತ್ತಿದೆ. ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಯುವಜನರು ತೋರುತ್ತಿರುವ ಉತ್ಸಾಹದಿಂದ ದೇಶ ಭದ್ರವಾಗಿದೆ ಎನ್ನುವ ವಿಶ್ವಾಸವಂತೂ ಮೂಡಿದೆ’ ಎಂದರು.

ಕರ್ನಾಟಕದ ವಿವಿಧ ಪ್ರಥಮ ದರ್ಜೆ ಕಾಲೇಜುಗಳ 550 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಮೂವರಿಗೆ ನಗದು ಬಹುಮಾನ, ಉಳಿದ 50 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ನಾಗೇಂದ್ರಕುಮಾರ್‌, ಶ್ರೀಹರಿ, ರುದ್ರೇಶ್ ಅದರಂಗಿ, ರಾಜಶೇಖರಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.