ಬೆಂಗಳೂರು: ಮುಟ್ಟು, ಮುಟ್ಟಿನ ಸ್ವಚ್ಛತೆ ಬಗ್ಗೆ ನಿರಂತರ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಬಂದಿರುವ ಸಕ್ರಿಯ ಚಾರಿಟಬಲ್ ಟ್ರಸ್ಟ್ ಈಗ ಮಹಿಳೆಯರಿಗೆ, ಆಟೊಗಳಲ್ಲಿ ಸ್ಯಾನಿಟರಿ ಪ್ಯಾಡ್ ದೊರಕುವಂತೆ ಮಾಡುವ ‘ಕ್ಷೇಮ’ ಯೋಜನೆಗೆ ಕೈ ಹಾಕಿದೆ.
ಮೊದಲ ಹಂತದಲ್ಲಿ 10 ಆಟೊಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಇಡಲಾಗಿದೆ. ಇದರಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಓಡಿಸುವ ಆಟೊ, ಮಹಿಳೆಯರು, ಪುರುಷರು ಓಡಿಸುವ ಆಟೊಗಳು ಸೇರಿವೆ. ಮಹಿಳೆಯರೇ ಓಡಿಸುವ 100ಕ್ಕೂ ಅಧಿಕ ಆಟೊಗಳು ನಗರದಲ್ಲಿದ್ದು, ಅದರಲ್ಲಿ 35 ಆಟೊಗಳಿಗೆ ಇದೇ ವಾರ ಸ್ಯಾನಿಟರಿ ಪ್ಯಾಡ್ ಬರಲಿದೆ.
ಎಲ್ಲ ಸ್ತರದ ಮಹಿಳೆಯರಲ್ಲಿ ಮುಟ್ಟು ಮತ್ತು ಮುಟ್ಟಿನ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಾಜಿ ಗಗನಸಖಿ ಅನಿತಾ ರಾವ್ ಈ ಯೋಜನೆಯನ್ನು ರೂಪಿಸಿದ್ದಾರೆ.
‘ಯಾವುದೇ ಸ್ಥಳದಲ್ಲೂ ಆಟೊದಲ್ಲಿ ಈ ರೀತಿ ಸ್ಯಾನಿಟರಿ ಪ್ಯಾಡ್ ಸಿಗುವುದಿಲ್ಲ. ಭಾರತದಲ್ಲಿ ಹೆಜ್ಜೆ ಹೆಜ್ಜೆಗೆ ಪ್ರಾರ್ಥನಾ ಮಂದಿರ ಸಿಗಬಹುದು. ಶೌಚಾಲಯ, ಮಹಿಳೆಯರ ಬಳಕೆಗೆ ಬೇಕಾದವು ಮಾತ್ರ ಸುಲಭದಲ್ಲಿ ಸಿಗಲಾರದು. ಈ ಸ್ಥಿತಿ ಬದಲಾಯಿಸಲು ಇಂಥ ಯೋಜನೆ ಅಗತ್ಯ’ ಎಂದು ಅನಿತಾ ರಾವ್ ಪ್ರತಿಪಾದಿಸಿದರು.
‘ಉದ್ಯೋಗದಲ್ಲಿರುವ ಹೆಣ್ಣು ಮಕ್ಕಳು ಉದ್ಯೋಗದ ಒತ್ತಡದಲ್ಲಿ ಮುಟ್ಟಿನ ದಿನ ಮರೆತುಬಿಟ್ಟಿರುತ್ತಾರೆ. ಅಂಥವರಿಗೆ ಸುಲಭದಲ್ಲಿ ಸ್ಯಾನಿಟರಿ ಪ್ಯಾಡ್ ಸಿಗುವಂತೆ ಆಟೊದಲ್ಲಿ ಅಳವಡಿಸಲು ನಮ್ಮನ್ನು ಸಕ್ರಿಯ ಟ್ರಸ್ಟ್‌ನವರು ಕೇಳಿದರು. ಜನರಿಗೆ ಉಪಯೋಗ ಆಗುವಂಥ ಯೋಜನೆ. ಎರಡು ದಿನದ ಹಿಂದೆ ಇಟ್ಟಿದ್ದಾರೆ. ಇಲ್ಲಿವರೆಗೆ ಇಬ್ಬರು ಪಡೆದಿದ್ದಾರೆ’ ಎಂದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಆಟೊ ಚಾಲಕಿ ಪ್ರೀತಿ ತಿಳಿಸಿದರು.
‘ಮಹಿಳೆಯರ ಸಂಕಷ್ಟ ಅನ್ಯರಿಗೆ ಅರ್ಥವಾಗುವುದಿಲ್ಲ. ಅಗತ್ಯವಿದ್ದಾಗ ಸ್ಯಾನಿಟರಿ ಪ್ಯಾಡ್ ಒದಗಿಸುವುದು ಪುಣ್ಯದ ಕೆಲಸ. ಅದಕ್ಕೆ ನಾನು ದುಡ್ಡು ತೆಗೆದುಕೊಳ್ಳುವುದಿಲ್ಲ. ಸೇವೆಯ ಬಗ್ಗೆ ವಿಡಿಯೊದಲ್ಲಿ ಮಾತನಾಡಿ ಎಂದು ಕೇಳಿದಾಗ ಸಂಕೋಚಪಟ್ಟುಕೊಂಡರು. ಅವರ ನಿರ್ಧಾರ ಗೌರವಿಸಿ ವಿಡಿಯೊ ಮಾಡಿಲ್ಲ’ ಎಂದು ಆಟೊ ಚಾಲಕಿ ದೇವಿ ಪ್ರತಿಕ್ರಿಯಿಸಿದರು.
‘ಆಟೊ ಚಾಲಕರು ಪುರುಷರಾದರೆ ಹೆಣ್ಮಕ್ಕಳು ಪ್ಯಾಡ್ ಕೇಳಲು ಸಂಕೋಚ ಪಡಬಹುದು. ಕೇಳದೆಯೇ ಆಟೊಗಳಲ್ಲಿ ಪ್ಯಾಡ್ ತೆಗೆದುಕೊಳ್ಳಬಹುದು’ ಎಂದು ಆಟೊ ಕನ್ನಡಿಗ ಅಜ್ಜು (ಅಜ್ಮಲ್ ಹುಸೇನ್) ತಿಳಿಸಿದ್ದಾರೆ.
‘ಸಾರ್ವಜನಿಕ ಸಾರಿಗೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್‌ಗಳನ್ನು ಲಭ್ಯಗೊಳಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕೈಗೊಂಡಿರುವ ಯೋಜನೆ ಇದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಎಕ್ಸ್’ನಲ್ಲಿ ಬಣ್ಣಿಸಿದ್ದಾರೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವಿಮಾನ ಹೊರತುಪಡಿಸಿ ಮತ್ತೆಲ್ಲಿಯೂ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್‌ಗಳಿಲ್ಲ. ಆಟೊ ಟ್ಯಾಕ್ಸಿ ಬಸ್ ರೈಲು ಸೇರಿವಿವಿಧ ಸಾರಿಗೆಗಳಲ್ಲಿ ಸಂಚರಿಸುವಾಗ ಮುಟ್ಟಾದರೆ ಮಹಿಳೆ ಏನು ಮಾಡಬೇಕು? ಈ ಪ್ರಶ್ನೆಯೇ ಯೋಜನೆಗೆ ಕಾರಣವಾಯಿತು ಎಂದು ಯೋಜನೆ ರೂವಾರಿ ಸಕ್ರಿಯ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ಅನಿತಾ ರಾವ್ ಹೇಳಿದರು. ಸಾರಿಗೆ ನಿಗಮದ ಬಸ್‌ಗಳಲ್ಲಿ ಇದೇ ಸೌಲಭ್ಯ ಕಲ್ಪಿಸಿದರೆ ಮಹಿಳಾ ಪ್ರಯಾಣಿಕರಿಗೆ ಅನುಕೂಲ. ಪ್ಯಾಡ್ ಮುಗಿದಾಗ ಮತ್ತೆ ತಂದಿಡಲು ಚಾಲಕರು ನಿರ್ವಾಹಕರು ತಯಾರಾದರಷ್ಟೇ ಯಶಸ್ವಿ ಆಗಲಿದೆ. ಸದ್ಯ ಆಟೊದಲ್ಲಿ ಸ್ಯಾನಿಟರಿ ಪ್ಯಾಡ್ ಇಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.