ADVERTISEMENT

ಪಾದಚಾರಿ ಮಾರ್ಗದಲ್ಲಿ ಕೇಬಲ್ ರಾಶಿ: ಜಾರಿಬಿದ್ದು ಗಾಯ

* ಭೂಪಸಂದ್ರ– ಹೆಬ್ಬಾಳ ಮುಖ್ಯರಸ್ತೆಯಲ್ಲಿ ಘಟನೆ * ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 19:55 IST
Last Updated 21 ಜನವರಿ 2023, 19:55 IST

ಬೆಂಗಳೂರು: ಪಾದಚಾರಿ ಮಾರ್ಗದಲ್ಲಿ ಹರಡಿಕೊಂಡಿದ್ದ ಕೇಬಲ್ ರಾಶಿಯಿಂದಾಗಿ ಜಾರಿಬಿದ್ದು ಬಿ.ಕೃಷ್ಣಮೂರ್ತಿ(57) ಎಂಬುವವರು ತೀವ್ರ ಗಾಯಗೊಂಡಿದ್ದು, ಈ ಸಂಬಂಧ ಕೇಬಲ್ ಮಾಲೀಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

‘ಭೂಪಸಂದ್ರ– ಹೆಬ್ಬಾಳ ಮುಖ್ಯರಸ್ತೆಯ ಒಂದನೇ ಅಡ್ಡರಸ್ತೆಯ ಪಾದಚಾರಿ ಮಾರ್ಗದಲ್ಲಿ ಜ. 7ರಂದು ನಡೆದಿರುವ ಘಟನೆ ಸಂಬಂಧ ಮಲ್ಲೇಶ್ವರ ನಿವಾಸಿ ಕೃಷ್ಣಮೂರ್ತಿ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಸಂಜಯನಗರ ಠಾಣೆ ಪೊಲೀಸ್ ಮೂಲಗಳು ತಿಳಿಸಿವೆ.

‘ಕೃಷ್ಣಮೂರ್ತಿ ಅವರು ಕೆಲಸ ನಿಮಿತ್ತ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ವಕೀಲರೊಬ್ಬರ ಕಚೇರಿಗೆ ಹೊರಟಿದ್ದರು. ಪಾದಚಾರಿ ಮಾರ್ಗದಲ್ಲಿ ಟಿ.ವಿ ಕೇಬಲ್ ರಾಶಿ ಬಿದ್ದಿತ್ತು. ಹಳೇ ಕೇಬಲ್‌ಗಳು ಒಂದಕ್ಕೊಂದು ಅಂಟಿಕೊಂಡು ಜನರ ಜೀವಕ್ಕೆ ಅಪಾಯ ತರುವ ಸ್ಥಿತಿಯಲ್ಲಿದ್ದವು. ಕೃಷ್ಣಮೂರ್ತಿ ಅವರು ಕೇಬಲ್ ರಾಶಿ ದಾಟಿ ಮುಂದಕ್ಕೆ ಹೋಗಲು ಯತ್ನಿಸಿದ್ದರು. ಕೇಬಲ್ ಮೇಲೆ ಕಾಲಿಡುತ್ತಿದ್ದಂತೆ ಜಾರಿ ಬಿದ್ದಿದ್ದರು.’

ADVERTISEMENT

ನಟನ ಸಾವಿಗೆ ಕಾರಣವಾಗಿದ್ದ ಕೇಬಲ್
ಮಲ್ಲೇಶ್ವರ 17ನೇ ಅಡ್ಡರಸ್ತೆಯಲ್ಲಿ 2013ರಲ್ಲಿ ಕೇಬಲ್‌ನಿಂದಾಗಿ ಸಂಭವಿಸಿದ್ದ ಅಪಘಾತದಲ್ಲಿ ನಟ ಅನಿಲ್‌ಕುಮಾರ್ ಎಂಬುವವರು ಮೃತಪಟ್ಟಿದ್ದರು. ಇದಾದ ನಂತರ ಹಲವೆಡೆ ಕೇಬಲ್‌ನಿಂದಾಗಿ ಅವಘಡಗಳು ಸಂಭವಿಸಿ, ಜನರು ಗಾಯಗೊಂಡಿದ್ದರು.

‘ಬಿಇಎಲ್ ಬಡಾವಣೆಯಲ್ಲಿ ವಾಸವಿದ್ದ ಅನಿಲ್‌ಕುಮಾರ್, ಬಿಎಂಡಬ್ಲ್ಯೂ ಬೈಕ್‌ನಲ್ಲಿ ಹೊರಟಿದ್ದರು. ರಸ್ತೆಯಲ್ಲಿ ಕೇಬಲ್ ಸುರುಳಿ ತುಂಡಾಗಿ ಬಿದ್ದಿತ್ತು. ವೇಗವಾಗಿ ಹೊರಟಿದ್ದ ಬೈಕ್‌ನ ಚಕ್ರಕ್ಕೆ ಕೇಬಲ್ ಸಿಲು ಕಿತ್ತು. ಅನಿಲ್‌ಕುಮಾರ್ ಅವರ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿತ್ತು’ ಎಂದು ಪೊಲೀಸ್ ಮೂಲ ಗಳು ಹೇಳಿವೆ. ಕೇಬಲ್ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು, ‘ಎಲ್ಲೆಂದರಲ್ಲಿ ಕೇಬಲ್‌ ಬೀಳು ತ್ತಿವೆ. ಕೇಬಲ್‌ನಿಂದಾಗಿ ವೃದ್ಧರು, ಮಕ್ಕಳು ಅಪಾಯಕ್ಕೆ ಸಿಲುಕು ತ್ತಿದ್ದಾರೆ. ಕೇಬಲ್ ತೆರವಿಗೆ ಬಿಬಿ ಎಂಪಿ ಕ್ರಮ ಕೈಗೊಳ್ಳುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.