
ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಿದರೆ 58 ಮರಗಳಲ್ಲ, 85 ಮರಗಳು ಬುಡಮೇಲಾಗುತ್ತವೆ. ಅಷ್ಟೇ ಅಲ್ಲ, 400ಕ್ಕೂ ಹೆಚ್ಚು ಗಿಡ–ಮರಗಳು ಹಾನಿಗೊಳಗಾಗುತ್ತವೆ. ಪರಿಸರದ ಮೇಲೆ ಭರಿಸಲಾಗದಷ್ಟು ದುಷ್ಪರಿಣಾಮ ಬೀರುತ್ತದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಪರಿಸರದ ಮೇಲಿನ ಪರಿಣಾಮ’ ವರದಿ ತಿಳಿಸಿದೆ.
ಸ್ಯಾಂಕಿ ರಸ್ತೆಯಲ್ಲಿ ಸುಮಾರು 600 ಮೀಟರ್ ಉದ್ದದ ಮೇಲ್ಸೇತುವೆ ಮಾಡುವ ಪ್ರದೇಶದಲ್ಲಿ ಪಾರಂಪರಿಕವಾದ ಹಾಗೂ ಅಸಾಮಾನ್ಯವಾದ 85 ಮರಗಳನ್ನು ಕಡಿಯಬೇಕಾಗುತ್ತದೆ. ಇದರಲ್ಲಿ 34 ಪ್ರಭೇದದ ಮರಗಳಿವೆ. ಇದಲ್ಲದೆ, ಸ್ಯಾಂಕಿ ಕೆರೆಯ ಏರಿ ಸೇರಿದಂತೆ ಈ ಭಾಗದಲ್ಲಿ ಬೆಳೆದು ನಿಂತಿರುವ ಸುಮಾರು 400 ಗಿಡಗಳಿಗೆ ಮೇಲ್ಸೇತುವೆ ನಿರ್ಮಾಣದಿಂದ ಪರೋಕ್ಷವಾಗಿ ಹಾನಿಯಾಗಲಿದೆ. ಏರಿಯ ಸಾಕಷ್ಟು ಅಗೆತದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದನ್ನು ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್) ನಮೂದಿಸಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರೊ. ಹರಿಣಿ ನಾಗೇಂದ್ರ, ಪ್ರೊ. ಸೀಮಾ ಮುಂಡೋಲಿ ಹಾಗೂ ವೃಕ್ಷ ಫೌಂಡೇಷನ್‌ನ ವಿಜಯ್ ನಿಶಾಂತ್ ಅವರು, ‘ಸ್ಯಾಂಕಿ ರಸ್ತೆಯಲ್ಲಿ ಪ್ರಸ್ತಾವಿತ ಮೇಲ್ಸೇತುವೆಯಿಂದ ಉಂಟಾಗುವ ಪರಿಸರದ ಮೇಲಿನ ದುಷ್ಪರಿಣಾಮ’ ವರದಿಯನ್ನು ಸ್ಥಳೀಯವಾಗಿ ಅಧ್ಯಯನ ನಡೆಸಿ ಸಿದ್ಧಪಡಿಸಿದ್ದಾರೆ.
‘ಹಲವು ದಶಕಗಳಿಂದಿರುವ, ಇದೀಗ ಬುಡಮೇಲಾಗುವ ರೈನ್‌ಟ್ರೀಯ ಬುಡದ ಸುತ್ತಳತೆ 500 ಸೆಂಟಿ ಮೀಟರ್ ಇದೆ. ಮಾವಿನ ಮರದ ಬುಡದ ಸುತ್ತಳತೆ 450 ಸೆಂ.ಮೀ, ಹುಣಸೆಮರದ ಬುಡದ ಸುತ್ತಳತೆ 422 ಸೆಂ. ಮೀಟರ್ ಇದೆ. ಇಂತಹ ಬೃಹತ್ ಮರಗಳನ್ನು ಕಡಿದರೆ ಅದಕ್ಕೆ ಪರ್ಯಾಯ ಎಂದು ಯೋಚಿಸುವುದು ಕಷ್ಟ. ಅಷ್ಟೇ ಅಲ್ಲ, ಯಾವುದೇ ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನ ಪರಿಸರದ ಮೇಲಿನ ದುಷ್ಪರಿಣಾಮದ ವರದಿ ಸಿದ್ಧಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಚಂಡೀಗಢದ ಪ್ರಕರಣವೊಂದರಲ್ಲಿ ತಿಳಿಸಿದೆ. ಆದರೆ ಇಲ್ಲಿ ಬಿಬಿಎಂಪಿ ಆ ಸಮೀಕ್ಷಾ–ವರದಿ ಮಾಡಿಲ್ಲ’ ಎಂದು ವಿಜಯ್ ನಿಶಾಂತ್ ಹೇಳಿದರು.
‘ಗಿಡ–ಮರ ಮಾತ್ರ ಕಡಿಯಲಾಗುತ್ತದೆ ಎಂಬ ಮಾತಿನಲ್ಲಿ ಸತ್ಯವಿಲ್ಲ. ಇದರಿಂದ ಜೀವವೈವಿಧ್ಯಕ್ಕೆ ತೊಂದರೆಯಾಗುತ್ತದೆ. ಸ್ಯಾಂಕಿ ಕೆರೆಯ ಸುತ್ತಮುತ್ತ ಸಾಕಷ್ಟು ಪಕ್ಷಿಗಳಿವೆ. ಅವುಗಳ ಜೀವನಕ್ರಮವಿರುತ್ತದೆ. ಈ ಬೃಹತ್ ಮರಗಳನ್ನು ಕಡಿಯುವುದರಿಂದ ನಾಗರಿಕರ ಜೊತೆಗೆ ಪಕ್ಷಿಸಂಕುಲದ ಮೇಲೂ ದುಷ್ಪರಿಣಾಮ ಬೀರುತ್ತದೆ’ ಎಂದರು.
ಸ್ಥಳೀಯ ನಿವಾಸಿಗಳ ವಿರೋಧದ ನಡುವೆಯೂ ಬಿಬಿಎಂಪಿ ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಲು ಮುಂದಾಗಿದೆ. ‘ಸುಸ್ಥಿರ ಅಭಿವೃದ್ಧಿ ಯೋಜನೆಯಡಿಯೇ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದ್ದರು. ಆದರೆ, ವಾಸ್ತವದಲ್ಲಿ ಯಾವುದೇ ರೀತಿಯ ಪರಿಸರ ದುಷ್ಪರಿಣಾಮವನ್ನು ದಾಖಲಿಸಿಲ್ಲ. ಈಗ ಈ ‘ಇಐಎಆರ್’ ಎಲ್ಲವನ್ನೂ ಬಯಲು ಮಾಡಿದೆ.
ಜೀವವೈವಿಧ್ಯಕ್ಕೆ ದಕ್ಕೆ
ಈ ವರದಿಯಂತೆ ಪರಿಸರದ ಮೇಲೆ ಪ್ರಮುಖವಾಗಿ ಐದು ಅಂಶಗಳಲ್ಲಿ ದುಷ್ಪರಿಣಾಮವಾಗಲಿದೆ. ಹಸಿರು ಹೊದಿಕೆ ಕಡಿಮೆಯಾಗಿ, ಇಂಗಾಲದ ಪ್ರಮಾಣ ಹೆಚ್ಚಾಗುತ್ತದೆ. ವಾಯುಮಾಲಿನ್ಯ ಹೆಚ್ಚಾಗುತ್ತದೆ. ವಾತಾವರಣದಲ್ಲಿ ಅನಿರೀಕ್ಷಿತ ದುಷ್ಪರಿಣಾಮ ಹೆಚ್ಚಾಗುತ್ತದೆ. ನಗರ ಜೀವವೈವಿಧ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಸ್ಯಾಂಕಿ ಕೆರೆಯಲ್ಲಿನ ಜೀವವೈವಿಧ್ಯಕ್ಕೆ ದಕ್ಕೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.