ADVERTISEMENT

ಮನೆಗಳಲ್ಲೇ ಸುಗ್ಗಿಗೆ ಸಜ್ಜು: ಖರೀದಿ ಜೋರು

ವಾರಾಂತ್ಯ ಕರ್ಫ್ಯೂ ದಿನವೇ ಸಂಕ್ರಾಂತಿ ಹಬ್ಬ– ವ್ಯಾಪಾರಿಗಳಿಗೆ ಚಿಂತೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 20:07 IST
Last Updated 11 ಜನವರಿ 2022, 20:07 IST
ಗಾಂಧಿಬಜಾರ್‌ನ ಮಳಿಗೆಗಳಲ್ಲಿ ಸಂಕ್ರಾಂತಿ ಪ್ರಯುಕ್ತ ಎಳ್ಳು–ಬೆಲ್ಲ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ್. ಟಿ.
ಗಾಂಧಿಬಜಾರ್‌ನ ಮಳಿಗೆಗಳಲ್ಲಿ ಸಂಕ್ರಾಂತಿ ಪ್ರಯುಕ್ತ ಎಳ್ಳು–ಬೆಲ್ಲ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ್. ಟಿ.   

ಬೆಂಗಳೂರು: ಮಕರ ಸಂಕ್ರಾಂತಿ ಆಚರಣೆಗೆ ವಾರಾಂತ್ಯ ಕರ್ಫ್ಯೂ ಅಡ್ಡಿಯಾಗಿದೆ. ಆದರೂ,ಹಬ್ಬಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳ ಖರೀದಿ ಭರಾಟೆಮಂಗಳವಾರದಿಂದಲೇ ಶುರುವಾಗಿದೆ.

ಶನಿವಾರ (ಜ.15) ಮಕರ ಸಂಕ್ರಾಂತಿ ಹಬ್ಬವಿದೆ. ಕೋವಿಡ್‌ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಹಬ್ಬದ ಅದ್ಧೂರಿ ಆಚರಣೆಗೆ ಅವಕಾಶ ಇಲ್ಲ. ಬೆಂಗಳೂರಿನ ಜನ ಮನೆಗಳಲ್ಲೇ ಸುಗ್ಗಿಯನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಸುತ್ತಿದ್ದಾರೆ.

ಕೆ.ಆರ್‌.ಮಾರುಕಟ್ಟೆ ಆವರಣದಲ್ಲಿ ಸಂಕ್ರಾಂತಿಗಾಗಿ ಟನ್‌ಗಟ್ಟಲೆ ಕಬ್ಬಿನ ಜಲ್ಲೆಗಳನ್ನು ಮಾರಾಟಕ್ಕೆ ಇಡಲಾಗಿದೆ.ಯಶವಂತಪುರ, ಗಾಂಧಿ ಬಜಾರ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ವಿಜಯನಗರ, ಮಡಿ
ವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆನಗರದ ಪ್ರಮುಖ ಬಡಾವಣೆಗಳಲ್ಲೂ ಕಬ್ಬು, ಕಡಲೆ
ಕಾಯಿ, ಅವರೆಕಾಯಿ, ಗೆಣಸು ರಾಶಿ ಹಾಕಲಾಗಿದೆ. ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಮಾರಾಟ ಮಾರುಕಟ್ಟೆಗಳಲ್ಲಿ ಕಳೆಗಟ್ಟಿದೆ.

ADVERTISEMENT

ಬಿಳಿ ಕಬ್ಬಿನ ಒಂದು ಜಲ್ಲೆಯ ಸಗಟು ದರ ₹50ವರೆಗೆ ಇದೆ. ಕಪ್ಪು ಬಣ್ಣದ ಕಬ್ಬಿನ ಜಲ್ಲೆ ₹70ರವರೆಗೆ ಮಾರಾಟವಾಗುತ್ತಿದೆ. ಚಿಲ್ಲರೆ ವ್ಯಾಪಾರಿಗಳು ಜಲ್ಲೆಗಳನ್ನು ತುಂಡರಿಸಿ, ಒಂದನ್ನು ₹10ರಿಂದ ₹20ರವರೆಗೆ ಮಾರಾಟ ಮಾಡುತ್ತಿದ್ದಾರೆ.

ಅಧಿಕ ಮಳೆಯಿಂದ ಈ ಬಾರಿ ಕಡಲೆಕಾಯಿ, ಅವರೆಕಾಯಿ ಬೆಳೆಗಳು ಹಾನಿಗೆ ಒಳಗಾಗಿದ್ದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿಲ್ಲ. ಹಾಗಾಗಿ ದರಗಳೂ ತುಸು ಹೆಚ್ಚೇ ಇವೆ. ಗಾಂಧಿ ಬಜಾರ್‌ನ ಮಳಿಗೆಗಳಲ್ಲಿಎಳ್ಳು– ಬೆಲ್ಲ, ಒಣ ಕೊಬ್ಬರಿ, ಕಡಲೆ ಬೀಜ, ಹುರಿಗಡಲೆ ಮಿಶ್ರಣ, ಸಕ್ಕರೆ ಅಚ್ಚು ಮಿಶ್ರಣದ ಮಾರಾಟ ಗರಿಗೆದರಿದೆ. ಎಳ್ಳು–ಬೆಲ್ಲ ಮಿಶ್ರಣದ 1 ಕೆ.ಜಿ. ಪೊಟ್ಟಣ ₹250ರಿಂದ ₹300ರವರೆಗೆ ಮಾರಾಟವಾಗುತ್ತಿದೆ.

‘ಹಬ್ಬಕ್ಕೆ ಉತ್ತಮವಾದ ಕಬ್ಬು ಬಂದಿದೆ. ಆದರೆ, ಸಂಕ್ರಾಂತಿಯಂದೇ ಕರ್ಫ್ಯೂ ಇರುವುದರಿಂದ ವ್ಯಾಪಾರ ನಡೆಯುವುದು ಅನುಮಾನ. ಇರುವ ಮೂರು ದಿನಗಳಲ್ಲಾದರೂ ಆದಷ್ಟು ವ್ಯಾಪಾರ ಆಗಲಿ ಎಂದುಈಗಿನಿಂದಲೇ ಕಬ್ಬಿನ ವ್ಯಾಪಾರ ಆರಂಭಿಸಿದ್ದೇವೆ. ಗ್ರಾಹಕರ ಸಂಖ್ಯೆ ಸದ್ಯ ಕಡಿಮೆ ಇದೆ. ಶುಕ್ರವಾರದ ವೇಳೆಗೆ ವ್ಯಾಪಾರ ತುಸು ಚೇತರಿಸುವ ನಿರೀಕ್ಷೆಯಿದೆ’ ಎಂದು ಕೆ.ಆರ್.ಮಾರುಕಟ್ಟೆ ಬಳಿ ಕಬ್ಬು ಮಾರಾಟ ಮಾಡುತ್ತಿರುವ ಮುನಿಯಪ್ಪ ಹೇಳಿದರು.

ಗಗನಕ್ಕೇರಿದ ಹೂವುಗಳ ದರ

ಬಸವನಗುಡಿ, ಗಾಂಧಿಬಜಾರ್, ಮಲ್ಲೇಶ್ವರ, ಜಯನಗರ, ಜೆ.ಪಿ.ನಗರ, ಹೆಬ್ಬಾಳ, ಯಶವಂತಪುರ, ಇಂದಿರಾನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಬ್ಬಕ್ಕಾಗಿ ಕಿರು ಮಾರುಕಟ್ಟೆಗಳು ತಲೆ ಎತ್ತಿವೆ. ಬಟ್ಟೆಗಳ ಮಾರಾಟವೂ ಕಳೆಗಟ್ಟಿದೆ. ತಿಂಗಳುಗಳಿಂದ ಗ್ರಾಹಕರಿಲ್ಲದೇ ಭಣಗುಡುತ್ತಿದ್ದ ಬಟ್ಟೆ ಮಳಿಗೆಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

ಸಂಕ್ರಾಂತಿ ಹಬ್ಬದ ವಿಶೇಷವಾದ ‘ಎಳ್ಳು–ಬೆಲ್ಲ’ ತಯಾರಿಸಲು ಬೆಲ್ಲ, ಎಳ್ಳು, ಬಣ್ಣದ ಬತಾಸು, ಕೊಬ್ಬರಿ ಖರೀದಿಯಿಂದಾಗಿ ದಿನಸಿ ಮಾರಾಟ ಮಳಿಗೆಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚು ಇತ್ತು.

ಸಂಕ್ರಾಂತಿಗಾಗಿ ಕೆ.ಆರ್‌.ಮಾರುಕಟ್ಟೆಗೆ ತಂದಿರುವ ಕಬ್ಬಿನ ಜಲ್ಲೆಗಳನ್ನು ಕಾರ್ಮಿಕರು ಕೆಳಗಿಳಿಸುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.