ADVERTISEMENT

ಬೆಂಗಳೂರು: ಸುಗ್ಗಿಯ ಸಂಕ್ರಾಂತಿ– ಹಿಗ್ಗಿದ ಸಂಭ್ರಮ

ಬೆಂಗಳೂರು ನಗರದಲ್ಲಿ ಸೋಮವಾರ ಸುಗ್ಗಿಯ ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಡೆ ಪಸರಿಸಿತ್ತು. ಮಹಿಳೆಯರು ಮನೆಗಳ ಮುಂದೆ ರಂಗೋಲಿ ಬಿಡಿಸಿ, ಎಳ್ಳು–ಬೆಲ್ಲ ಹಂಚಿ ಸಂಭ್ರಮಿಸಿದರು.

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 16:30 IST
Last Updated 15 ಜನವರಿ 2024, 16:30 IST
<div class="paragraphs"><p>ನಗರದ ಸುಧಾಮನಗರದ ಕೆ.ಎಸ್. ಗಾರ್ಡನ್‌ನಲ್ಲಿ ಸೋಮವಾರ ಮಕರ ಸಂಕ್ರಾಂತಿ ಪ್ರಯುಕ್ತ ಯುವತಿಯರು ಪೊಂಗಲ್ ತಯಾರಿ ಮಾಡಿ ಸಂಭ್ರಮದಿಂದ ಕುಣಿದರು. -ಪ್ರಜಾವಾಣಿ </p></div>

ನಗರದ ಸುಧಾಮನಗರದ ಕೆ.ಎಸ್. ಗಾರ್ಡನ್‌ನಲ್ಲಿ ಸೋಮವಾರ ಮಕರ ಸಂಕ್ರಾಂತಿ ಪ್ರಯುಕ್ತ ಯುವತಿಯರು ಪೊಂಗಲ್ ತಯಾರಿ ಮಾಡಿ ಸಂಭ್ರಮದಿಂದ ಕುಣಿದರು. -ಪ್ರಜಾವಾಣಿ

   

ಚಿತ್ರ/ ರಂಜು ಪಿ.

ಬೆಂಗಳೂರು: ನಗರದಲ್ಲಿ ಸೋಮವಾರ ಸುಗ್ಗಿಯ ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಡೆ ಪಸರಿಸಿತ್ತು. ಮಹಿಳೆಯರು ಮನೆಗಳ ಮುಂದೆ ರಂಗೋಲಿ ಬಿಡಿಸಿ, ಎಳ್ಳು–ಬೆಲ್ಲ ಹಂಚಿ ಸಂಭ್ರಮಿಸಿದರು. 

ADVERTISEMENT

ಮಕರ ಸಂಕ್ರಾಂತಿಯ ಪ್ರಯುಕ್ತ ಮನೆಯಲ್ಲಿ ನಾನಾ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸಿದ್ದರು. ಪರಸ್ಪರ ಎಳ್ಳು–ಬೆಲ್ಲ, ಕಬ್ಬು, ಕಡಲೇಕಾಯಿ ಹಂಚಿ ತಿಂದರು. ಎರಡು ದಿನಗಳಿಂದ ನಗರದ ವಿವಿಧ ಕಡೆಗಳಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿ, ಹೊಸಬಟ್ಟೆ ಖರೀದಿ ಜೋರಾಗಿಯೇ ನಡೆದಿತ್ತು. 

ವಿವಿಧ ದೇವಸ್ಥಾನಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಬಗೆಯ ಹೂವು, ಬಾಳೆದಿಂಡುಗಳಿಂದ ದೇಗುಲ ಸಿಂಗರಿಸಲಾಗಿತ್ತು. ವಿಶೇಷ ಪೂಜೆ, ಭಜನೆ, ಮಹಾಭಿಷೇಕ ಮತ್ತು ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಜನರು ಸೋಮವಾರ ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಶನಿವಾರ, ಭಾನುವಾರ ಮತ್ತು ಸೋಮವಾರ ಮೂರು ದಿನ ರಜೆ ಇದ್ದ ಕಾರಣ ಸರ್ಕಾರಿ ಕಚೇರಿ, ಕೈಗಾರಿಕೆಗಳಲ್ಲಿ ಕಳೆದ ಶುಕ್ರವಾರವೇ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ನಗರದಲ್ಲಿ ಜನಸಂಚಾರ ವಿರಳವಾಗಿತ್ತು.

ಚನ್ನವೀರಯ್ಯಪಾಳ್ಯ ಸೋಂಪುರ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿ ಪ್ರಯುಕ್ತ ಬಸವೇಶ್ವರಸ್ವಾಮಿ ರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ ನಡೆಯಿತು. ಬನಶಂಕರಿ ಭುವನೇಶ್ವರಿ ನಗರದಲ್ಲಿ ಸಂಕ್ರಾಂತಿ ಸೇವಾ ಸಮಿತಿಯಿಂದ ವಿವಿಧ ಸ್ಪರ್ಧೆಗಳು ನಡೆದವು.

ಸುಧಾಮನಗರದ ಕೆ.ಎಸ್. ಗಾರ್ಡನ್‌ನಲ್ಲಿ ಯುವತಿಯರು ಪೊಂಗಲ್ ತಯಾರಿ ಮಾಡಿ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಿದರು. ಪೊಂಗಲ್‌ ತಯಾರಿ ಮುಗಿದ ಬಳಿಕ ನೃತ್ಯ ಮಾಡಿ ಸಂಭ್ರಮಿಸಿದರು.

ಕನಕಪಾಳ್ಯದಲ್ಲಿ ರಾಸುಗಳನ್ನು ಕಿಚ್ಚು ಹಾಯಿಸುವ ದೃಶ್ಯ ರೋಮಾಂಚನವನ್ನುಂಟು ಮಾಡಿತು. ಮಹಿಳೆಯರು ಎಳ್ಳು ಬೆಲ್ಲ ಬೀರಿದರು. ‘ಎಳ್ಳು–ಬೆಲ್ಲ ತಿಂದು ಒಳ್ಳೆ ಮಾತನಾಡಿ’ ಎಂದು ಪರಸ್ಪರ ಹಾರೈಸಿದರು.

ಬೆಂಗಳೂರಿನ ಸುಧಾಮನಗರದ ಕೆ.ಎಸ್. ಗಾರ್ಡನ್‌ನಲ್ಲಿ ಸೋಮವಾರ ಮಕರ ಸಂಕ್ರಾಂತಿ ಪ್ರಯುಕ್ತ ಯುವತಿಯರು ಪೊಂಗಲ್ ತಯಾರಿಕೆಯಲ್ಲಿ ತೊಡಗಿದ್ದರು. -ಪ್ರಜಾವಾಣಿ ಚಿತ್ರ/ ರಂಜು ಪಿ.
ಬೆಂಗಳೂರಿನ ಕನಕಪಾಳ್ಯದಲ್ಲಿ ರಾಸುಗಳನ್ನು ಕಿಚ್ಚು ಹಾಯಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಕನಕಪಾಳ್ಯದಲ್ಲಿ ಮಹಿಳೆಯರು ಎಳ್ಳು- ಬೆಲ್ಲ ಬೀರಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.