
ಬೆಂಗಳೂರು: ಸಂಕ್ರಾಂತಿ ಹಬ್ಬದ ಆಚರಣೆಗೆ ನಗರ ಸಜ್ಜಾಗಿದೆ. ಇಲ್ಲಿನ ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಕಬ್ಬು, ಗೆಣಸು ಹಾಗೂ ಅವರೆಕಾಯಿ ಖರೀದಿ ಜೋರಾಗಿದೆ.
ಸಂಕ್ರಾಂತಿ ಹಬ್ಬ ಗುರುವಾರವಿದ್ದು, ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ರಾಶಿ, ರಾಶಿ ಕಬ್ಬಿನ ಜಲ್ಲೆ ಮಾರಾಟಕ್ಕಾಗಿ ಲಭ್ಯವಿದೆ. ಕಬ್ಬಿನ ಜಲ್ಲೆ ತಲಾ ₹60ರಂತೆ ಮಾರಾಟ ಆಗುತ್ತಿದೆ. ನಗರದ ಪ್ರಮುಖ ಬಡಾವಣೆಗಳಲ್ಲೂ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸು ರಾಶಿ ಹಾಕಲಾಗಿದ್ದು, ಮಾರುಕಟ್ಟೆ ಕಳೆಗಟ್ಟಿದೆ.
ಕಡಲೆಕಾಯಿ ಮತ್ತಷ್ಟು ತುಟ್ಟಿಯಾಗಿದೆ. ಗುಣಮಟ್ಟದ ಕಡಲೆಕಾಯಿ ಕೆ.ಜಿ.ಗೆ ₹80 ಮತ್ತು ₹120ರಂತೆ ಮಾರಾಟವಾಗುತ್ತಿದೆ. ಗಾಂಧಿ ಬಜಾರ್, ಮಲ್ಲೇಶ್ವರ, ಜಯನಗರ, ಯಶವಂತಪುರ, ರಾಜಾಜಿನಗರ, ಮಡಿವಾಳ, ಚಾಮರಾಜಪೇಟೆಯ ರಸ್ತೆ ಬದಿಯಲ್ಲಿ ಕಿರು ಮಾರುಕಟ್ಟೆಗಳು ಸೃಷ್ಟಿ ಆಗಿವೆ. ಎಳ್ಳು–ಬೆಲ್ಲ ಮಿಶ್ರಿತ ಪೊಟ್ಟಣಗಳು, ಸಕ್ಕರೆ ಹಾಗೂ ಬೆಲ್ಲದ ಅಚ್ಚುಗಳನ್ನು ಮಾರಾಟ ಮಾಡಲಾಗುತ್ತಿದೆ.
ಎಳ್ಳು ಬೆಲ್ಲ ಮಿಶ್ರಿತ ಪೊಟ್ಟಣಗಳು ವಿವಿಧ ಗಾತ್ರಗಳಲ್ಲಿ ಲಭ್ಯ ಇವೆ. ಸಣ್ಣ ಪೊಟ್ಟಣದ ದರ ₹50. ಮಳಿಗೆಗಳಲ್ಲಿ ಒಂದು ಕೆ.ಜಿ.ಯ ಎಳ್ಳುಬೆಲ್ಲ ಮಿಶ್ರಿತ ಪೊಟ್ಟಣದ ದರ ₹320ರಿಂದ ₹350 ಇದೆ. ಅರ್ಧ ಕೆ.ಜಿ ಸಕ್ಕರೆ ಅಚ್ಚು ₹150ರಂತೆ ಮಾರಾಟವಾಗುತ್ತಿದೆ.
‘ಸಂಕ್ರಾಂತಿ ಹಬ್ಬಕ್ಕೆ ಹೂವಿನ ದರ ಏರಿಕೆಯಾಗಿದೆ. ಒಂದು ಕೆ.ಜಿ. ಕನಕಾಂಬರ ₹600, ಮಲ್ಲಿಗೆ ₹1,800, ಚೆಂಡು ₹60, ಸೇವಂತಿಗೆ ₹150, ಗುಲಾಬಿ ₹150 ಮತ್ತು ಸುಗಂಧ ರಾಜ ₹80 ರಂತೆ ಮಾರಾಟವಾಗುತ್ತಿವೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಮಲ್ಲೇಶ್ವರದಲ್ಲಿ ಮಹಿಳೆಯರು ಎಳ್ಳು ಬೆಲ್ಲ ಸಕ್ಕರೆ ಅಚ್ಚುಗಳನ್ನು ಖರೀದಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.