ಯಲಹಂಕ: ವಿಜ್ಞಾನ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಕಾಲದಲ್ಲಿಯೂ ಸಂಸ್ಕೃತ ಭಾಷೆಯು ಹೆಚ್ಚು ಹೆಚ್ಚು ಪ್ರಚಾರದಲ್ಲಿರುವುದು ಈ ಭಾಷೆಯ ಪ್ರಾಮುಖ್ಯ ಹಾಗೂ ಮಹತ್ವವನ್ನು ಖಚಿತಪಡಿಸುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಅಭಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಹಾಗೂ ಸುರವಾಣಿ ಸಂಸ್ಕತ ಫೌಂಡೇಶನ್ ಆಶ್ರಯದಲ್ಲಿ ಎನ್‌ಟಿಐ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಸಂಸ್ಕೃತ ಶೋಭಾಯಾತ್ರೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನಿಗಳು, ತಂತ್ರಜ್ಞರು ಹಾಗೂ ಕೃತಕ ಬುದ್ಧಿಮತ್ತೆಯಲ್ಲಿ ಪಿಎಚ್.ಡಿ ಪಡೆದವರೂ ಸಂಸ್ಕೃತ ಭಾಷೆಯ ಮಹತ್ವವನ್ನು ಗುರುತಿಸಿದ್ದಾರೆ.ಇದು ತಂತ್ರಜ್ಞಾನಕ್ಕೆ ಪೂರಕ, ಪ್ರೇರಕ ಮತ್ತು ಸಹಕಾರಿಯಾಗಿರುವ ಏಕೈಕ ಭಾಷೆಯಾಗಿದೆ ಎಂದರು.
ಬಿಜೆಪಿ ಮುಖಂಡ ಎ.ರವಿ ಮಾತನಾಡಿ, ‘ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ಸಂಸ್ಕೃತ ಭಾಷೆಯ ಪ್ರೇಮವನ್ನು ಜಾಗೃತಗೊಳಿಸಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ’ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ಆರ್.ವಸಂತಕುಮಾರ್ ಶಾಸ್ತ್ರಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸಪ್ಪ ಡೊಂಕಬಳ್ಳಿ, ಮುಖಂಡರಾದ ವೆಂಕಟಾಚಲಪತಿ, ಎಚ್.ರವೀಂದ್ರ, ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.
ಶೋಭಾಯಾತ್ರೆ: ಕಾರ್ಯಕ್ರಮಕ್ಕೂ ಮುನ್ನ ಕಾಳಿಕಾ ದುರ್ಗಾಪರಮೇಶ್ವರಿ ದೇವಿಯ ಮೂರ್ತಿಯೊಂದಿಗೆ ದೇವಸ್ಥಾನದಿಂದ ಆರಂಭವಾದ ಸಂಸ್ಕೃತ ಶೋಭಾಯಾತ್ರೆಯು, ವಿದ್ಯಾರಣ್ಯಪುರದ ಎನ್‌ಟಿಐ ಕ್ರೀಡಾಂಗಣದವರೆಗೆ ಆಗಮಿಸಿತು. ದೇವ್-ಇನ್ ಅಕಾಡೆಮಿ ಫಾರ್ ಲರ್ನಿಂಗ್ ಶಾಲೆಯ 300ಕ್ಕೂ ಹೆಚ್ಚು ಮಕ್ಕಳು ಹಾಗೂ ಶಿಕ್ಷಕರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.