ADVERTISEMENT

ಸಣ್ಣ ನಗರಗಳ ಸಂಪರ್ಕಕ್ಕೆ 70 ಸೀಟರ್‌ ವಿಮಾನ

ಖಾಸಗಿಯವರೊಂದಿಗೆ ಪುಟ್ಟ ವಿಮಾನಗಳ ಅಭಿವೃದ್ಧಿಗೆ ಎನ್‌ಎಎಲ್‌ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 20:17 IST
Last Updated 22 ಫೆಬ್ರುವರಿ 2019, 20:17 IST
‘ಸರಸ್‌’ ವಿಮಾನ ಅಭಿವೃದ್ಧಿಪಡಿಸಿದ ತಂಡ ಮತ್ತು ಪೈಲಟ್‌ಗಳ ಜತೆಯಲ್ಲಿ ವಿಜ್ಞಾನಿ ರೊದ್ದಂ ನರಸಿಂಹ, ಸಿಎಸ್‌ಐಆರ್‌ ಮಹಾ ನಿರ್ದೇಶಕ ಡಾ.ಶೇಖರ್‌ ಸಿ. ಮಂಡೆ ಮತ್ತು ಎನ್‌ಎಎಲ್‌ ನಿರ್ದೇಶಕ ಜಿತೇಂದ್ರ ಜೆ. ಜಾಧವ್‌ ಇದ್ದರು.
‘ಸರಸ್‌’ ವಿಮಾನ ಅಭಿವೃದ್ಧಿಪಡಿಸಿದ ತಂಡ ಮತ್ತು ಪೈಲಟ್‌ಗಳ ಜತೆಯಲ್ಲಿ ವಿಜ್ಞಾನಿ ರೊದ್ದಂ ನರಸಿಂಹ, ಸಿಎಸ್‌ಐಆರ್‌ ಮಹಾ ನಿರ್ದೇಶಕ ಡಾ.ಶೇಖರ್‌ ಸಿ. ಮಂಡೆ ಮತ್ತು ಎನ್‌ಎಎಲ್‌ ನಿರ್ದೇಶಕ ಜಿತೇಂದ್ರ ಜೆ. ಜಾಧವ್‌ ಇದ್ದರು.   

ಬೆಂಗಳೂರು: ದೇಶದ ಸಣ್ಣ ನಗರ ಮತ್ತು ಪಟ್ಟಣಗಳ ಮಧ್ಯೆ ವಿಮಾನ ಯಾನಕ್ಕಾಗಿ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್‌ಎಎಲ್‌) ಮತ್ತು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಪರಿಷತ್ತು (ಸಿಎಸ್ಐಆರ್‌) ಜಂಟಿಯಾಗಿ 70ರಿಂದ 90 ಆಸನಗಳ ಸಾಮರ್ಥ್ಯದ ಸಣ್ಣ ವಿಮಾನಗಳ ಅಭಿವೃದ್ಧಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಿವೆ.

ಸಾಮಾನ್ಯ ಜನರೂ ಕಡಿಮೆ ವೆಚ್ಚದಲ್ಲಿ ವಿಮಾನಗಳಲ್ಲಿ ಸಂಚರಿಸಬೇಕು ಎಂಬ ಉದ್ದೇಶದ ‘ಉಡಾನ್‌’ ಯೋಜನೆಗೆ ಪೂರಕವಾಗಿ ‘ಪ್ರಾದೇಶಿಕ ಸಾರಿಗೆ ವಿಮಾನ’ (ಆರ್‌ಟಿಎ) ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಏರೋ ಇಂಡಿಯಾ ಪ್ರದರ್ಶನಲ್ಲಿ ಸಿಎಸ್‌ಐಆರ್‌–ಎನ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಜೆ. ಜಾಧವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಉದ್ದೇಶಕ್ಕೆ ₹ 6,000 ಕೋಟಿ ಅಗತ್ಯವಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಹಸಿರು ನಿಶಾನೆಯೂ ಸಿಕ್ಕಿದೆ. ಈ ಪ್ರಯತ್ನದಲ್ಲಿ ಎಚ್‌ಎಎಲ್‌, ಟಾಟಾ ಮತ್ತು ಇತರ ಅಂತರ ರಾಷ್ಟ್ರೀಯ ಪಾಲುದಾರರ ಸಹಭಾಗಿತ್ವವನ್ನೂ ಪಡೆಯಲಾಗುವುದು. ಎನ್‌ಎಎಲ್‌ ಈ ಯೋಜನೆಯ ನಾಯಕತ್ವ ಹೊಣೆಗಾರಿಕೆ ನಿಭಾಯಿಸಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಇದಕ್ಕೆ ಸಂಬಂಧಿಸಿದಂತೆ ಒಂದೂವರೆ ವರ್ಷದೊಳಗೆ ಸಂಪೂರ್ಣ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು. ಏಳು ವರ್ಷಗಳಲ್ಲಿ ವಿಮಾನ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ರಷ್ಯಾ, ಯೂರೋಪ್‌ ಮುಂತಾದ ಕಡೆಗಳಿಂದ ಅಂತರ ರಾಷ್ಟ್ರೀಯ ಪಾಲುದಾರರು ಸಿಗುವ ನಿರೀಕ್ಷೆ ಇದೆ’ ಎಂದು ಜಾಧವ್‌ ತಿಳಿಸಿದರು.

ಪ್ರಾದೇಶಿಕ ಸಾರಿಗೆ ವಿಮಾನ:‘ದೇಶ– ವಿದೇಶಗಳಲ್ಲಿ ಪ್ರಾದೇಶಿಕ ಸಾರಿಗೆ ಉದ್ದೇಶದ ವಿಮಾನಗಳಿಗೆ ಉತ್ತಮ ಬೇಡಿಕೆ ಇದ್ದು, ಅದನ್ನು ಪೂರೈಸಲು ಕಾರ್ಯ ಸಾಧ್ಯತೆ ವರದಿ ಸಿದ್ಧಪಡಿಸಿದ್ದೇವೆ. ಅದರ ಪ್ರಕಾರ ಮುಂದಿನ 20 ವರ್ಷಗಳಲ್ಲಿ ದೇಶದಲ್ಲಿ 250 ರಿಂದ 300 ಸಣ್ಣ ವಿಮಾನಗಳಿಗೆ ಬೇಡಿಕೆ ಬರಲಿದೆ’ ಎಂದು ಜಾಧವ್‌ ತಿಳಿಸಿದರು.

‘ಇದೇ ಅವಧಿಯಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ 7,000 ಸಣ್ಣ ವಿಮಾನಗಳಿಗೆ ಬೇಡಿಕೆ ಸಿಗಲಿದೆ. ಸೇನಾ ಉಪಕರಣಗಳು ಮತ್ತು ನಾಗರಿಕ ಉದ್ದೇಶದ ಸರಕು ಸಾಗಣೆಗೂ ಈ ವಿಮಾನಗಳು ಬಳಕೆ ಆಗುತ್ತವೆ’ ಎಂದು ಅವರು ಹೇಳಿದರು.

‘ಸರಸ್‌’ ವಿಮಾನದ ಹಾರಾಟದ ಎರಡನೇ ಪರೀಕ್ಷೆಯೂ ಸಫಲವಾಗಿದೆ. ಇದರ ಕಾರ್ಯ ನಿರ್ವಹಣೆಯ ಕುರಿತು ಪೈಲಟ್‌ಗಳಾದ ವಿಂಗ್‌ ಕಮಾಂಡರ್‌ ಯು.ಪಿ.ಸಿಂಗ್, ಪ್ರಭಾಕರನ್‌, ದಿಲ್ಲಿ ಬಾಬು ಮತ್ತು ಪಣಿಕ್ಕರ್‌ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ವಿಮಾನದಲ್ಲಿ ಸಾಕಷ್ಟು ಆಧುನಿಕತೆ ಇದ್ದು, ಮುಂದಿನ 20 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಏನಿಯಾನಿಕ್ಸ್‌ ಮತ್ತು ಇತರ ನಿಯಂತ್ರಣ ವ್ಯವಸ್ಥೆಯನ್ನು ಸೇರಿಸಲಾಗಿದೆ’ ಎಂದು ಯು.ಪಿ.ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.