ADVERTISEMENT

ಸರ್ಜಾಪುರ: ದೊಡ್ಡಕೆರೆ ಒಡಲಿಗೆ ಕನ್ನ–ಆಕ್ರೋಶ

ಅಕ್ರಮ ಮರಳು ದಂಧೆ ತಡೆಯಲು ಮುಂದಾದ ಸ್ಥಳೀಯರು; ಯಂತ್ರವನ್ನು ವಶಕ್ಕೆ ಪಡೆದ ಪೊಲೀಸರು; ಸಮೀಪದ ಕೆರೆಗಳಲ್ಲೂ ನಡೆಯುತ್ತಿದೆ ಅಕ್ರಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 19:11 IST
Last Updated 14 ಅಕ್ಟೋಬರ್ 2018, 19:11 IST
ಸರ್ಜಾಪುರ ದೊಡ್ಡಕೆರೆಯಲ್ಲಿ ಮಣ್ಣನ್ನು ತೆಗೆದಿರುವುದು(ಮೊದಲ ಚಿತ್ರ). ಮರಳುಮಿಶ್ರಿತ ಮಣ್ಣನ್ನು ಗುಡ್ಡೆ ಹಾಕಿರುವುದು.(ಎರಡನೇ ಚಿತ್ರ)
ಸರ್ಜಾಪುರ ದೊಡ್ಡಕೆರೆಯಲ್ಲಿ ಮಣ್ಣನ್ನು ತೆಗೆದಿರುವುದು(ಮೊದಲ ಚಿತ್ರ). ಮರಳುಮಿಶ್ರಿತ ಮಣ್ಣನ್ನು ಗುಡ್ಡೆ ಹಾಕಿರುವುದು.(ಎರಡನೇ ಚಿತ್ರ)   

ಬೆಂಗಳೂರು: ಸರ್ಜಾಪುರದ ದೊಡ್ಡಕೆರೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಿರುದ್ಧ ಸ್ಥಳೀಯರು ಸಿಡಿದೆದ್ದಿದ್ದಾರೆ. ಈ ಕೆರೆಯನ್ನು ಉಳಿಸಲು ಪಣತೊಟ್ಟಿದ್ದಾರೆ.

‘ವಾಯ್ಸ್‌ ಆಫ್‌ ಸರ್ಜಾಪುರ’ ನೇತೃತ್ವದಲ್ಲಿ ಸರ್ಜಾಪುರದಲ್ಲಿಭಾನುವಾರ ಸಭೆ ನಡೆಸಿದ ಸ್ಥಳೀಯರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಣ್ಣು ತೆಗೆಯಲು ಬಳಸುತ್ತಿದ್ದ ಜೆಸಿಬಿಯನ್ನು ವಶಕ್ಕೆ ಪಡೆದರು.

‘ಈ ಕೆರೆಯ ಮೇಲ್ಪದರದ ಮಣ್ಣಿನಲ್ಲಿ ಮರಳಿನಂಶ ಹೆಚ್ಚು ಇರುತ್ತದೆ. ನಿತ್ಯ ಏನಿಲ್ಲವೆಂದರೂ 30ಕ್ಕೂ ಅಧಿಕ ಲೋಡ್‌ ಮಣ್ಣು ಸಾಗಿಸಲಾಗುತ್ತದೆ. ಈ ಮಣ್ಣಿನಿಂದ ಫಿಲ್ಟರ್‌ ಮರಳು ಪಡೆಯುತ್ತಾರೆ. ಮುಗಳೂರು ಗ್ರಾಮದಲ್ಲಿ ದಕ್ಷಿಣ ಪಿನಾಕಿನಿ ನದಿಯ ಬಳಿ ಇಂತಹ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಈ ಮಣ್ಣಿನಿಂದ ಮರಳನ್ನು ಬೇರ್ಪಡಿಸಲು ಈ ನದಿಯ ನೀರನ್ನು ಬಳಸಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಶ್ರೀರಾಮುಲು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ದಶಕಗಳ ಹಿಂದೆ ಈ ಕೆರೆ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತಿತ್ತು. ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಿಗಳು ಬರುತ್ತಿದ್ದವು. ಇಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚಾದ ಬಳಿಕ ಕೆರೆ ಬತ್ತಿದೆ. ಪಕ್ಷಿಗಳೂ ಕಣ್ಮರೆಯಾಗಿವೆ’ ಎಂದರು.

‘ಸರ್ಜಾಪುರ ಹೋಬಳಿಯ ಪಂಡಿತನಗರ ಕೆರೆ, ಚಿಕ್ಕಕೆರೆ, ಮುಗಳೂರು ಕೆರೆಗಳಲ್ಲೂ ಅಕ್ರಮ ಮರಳು ದಂಧೆ ನಡೆಯುತ್ತಿದೆ’ ಎಂದು ದೂರಿದರು.

ವಾಯ್ಸ್‌ ಆಫ್‌ ಸರ್ಜಾಪುರ ಸಂಘಟನೆಯ ರೈಸಿ, ‘ಯಮರೆ, ಇಟ್ಟಂಗೂರು ಹಾಗೂ ಸರ್ಜಾಪುರ ಗ್ರಾಮಗಳ ವ್ಯಾಪ್ತಿಯ ದೊಡ್ಡಕೆರೆ 204 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ಕೆರೆ ಸಂರಕ್ಷಣೆಗೆ ಒತ್ತಾಯಿಸಿ ನಾವುಇದೇ 30ರಂದು ಜನ ಜಾಥಾ ಹಮ್ಮಿಕೊಳ್ಳಲಿದ್ದೇವೆ’ ಎಂದು ತಿಳಿಸಿದರು.

**

‘ಗ್ರಾ. ಪಂ. ಸದಸ್ಯರು ಶಾಮೀಲು’

‘ಅಕ್ರಮ ಮರಳು ದಂಧೆಯಲ್ಲಿ ಯಮರೆ ಹಾಗೂ ಸರ್ಜಾಪುರ ಗ್ರಾಮ ಪಂಚಾಯಿತಿಗಳ ಸದಸ್ಯರೂ ಭಾಗಿಯಾಗಿದ್ದಾರೆ. ಹಾಗಾಗಿ ರಾಜಾರೋಷವಾಗಿಯೇ ಕೆರೆಯ ಒಡಲನ್ನು ಬಗೆಯಲಾಗುತ್ತಿದೆ’ ಎಂದು ಸ್ಥಳೀಯರುಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.