ಬೆಂಗಳೂರು: ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಅನ್ನುವುದು ಕನಸಾಗಿಯೇ ಉಳಿದಿದೆ. ಆದ್ದರಿಂದ, ಸರೋಜಿನಿ ಮಹಿಷಿ ವರದಿಗೆ ಕಾನೂನು ಬಲ ನೀಡಿ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ ಆಗ್ರಹಿಸಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ‘ಪರಿಷ್ಕೃತ ಸರೋಜಿನಿ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆದರೆ, ಕೇಂದ್ರ ಅನುಷ್ಠಾನಗೊಳಿಸಬೇಕಾದ ಅಂಶಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಲು ರಾಜ್ಯ ಸರ್ಕಾರಕ್ಕೆ ನೈತಿಕ ಶಕ್ತಿ ಬರುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ 2008ರಿಂದ ಸ್ಥಳೀಯರಿಗೆ ಉದ್ಯೋಗ ರಾಷ್ಟ್ರೀಯ ನೀತಿಯಾಗಲಿ ಎಂದು ಪ್ರತಿಪಾದಿಸುತ್ತಿದೆ. ಆ ನಿಟ್ಟಿನಲ್ಲಿ ಏನೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ‘ಎಂಪ್ಲಾಯ್‌ಮೆಂಟ್ ನ್ಯೂಸ್’ ಮಾದರಿಯಲ್ಲಿ ರಾಜ್ಯ ಸರ್ಕಾರವು ಕೂಡ ಕನ್ನಡದಲ್ಲಿ ಅಧಿಕೃತ ಉದ್ಯೋಗ ವಾರ್ತೆಯ ಪ್ರತಿಕೆಯನ್ನು ಪ್ರಕಟಿಸಬೇಕು. ರಾಜ್ಯದ ಎಲ್ಲ ವಲಯಗಳಲ್ಲಿಯೂ ಸೃಷ್ಟಿಯಾಗುವ ಉದ್ಯೋಗ ಮಾಹಿತಿ ನೀಡುವ ಕನ್ನಡಿಗರ ಉದ್ಯೋಗ ಮಾರ್ಗದರ್ಶಿ ಎಂಬ ವೆಬ್ ಪೋರ್ಟಲ್ ರೂಪಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರವು 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡಿದೆ. ಆದರೆ, ಕನ್ನಡ ಸಿಗಬೇಕಾದ ಸವಲತ್ತುಗಳನ್ನು ಇದುವರೆಗೂ ಸಾಧ್ಯವಾಗಿಲ್ಲ. ತಮಿಳಿನಲ್ಲಿ ಆಗಿರುವ ಕೆಲಸದಲ್ಲಿ ಶೇ 5ರಷ್ಟು ಕೆಲಸಗಳು ಕನ್ನಡದಲ್ಲಿ ಆಗಿಲ್ಲ. ಕನ್ನಡ ಭಾಷ ಸಮಗ್ರ ಅಭಿವೃದ್ಧಿ ವಿಧೇಯಕ–2022ರಲ್ಲಿ ಸ್ಪಷ್ಟತೆ ಇಲ್ಲ. ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇ 38ರಷ್ಟಿದ್ದು, ಶೇ 68ರಷ್ಟು ಜನ ಪರಭಾಷಿಕರಿದ್ದಾರೆ. ಆದ್ದರಿಂದ ಅನ್ಯಪ್ರಾಂತೀಯ ವಲಸಿಗರ ಪರಿಣಾಮ ತಿಳಿಯಲು ಸಮಿತಿ ರಚಿಸಬೇಕು ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಹೇಳಿದರು.
ವಿಶ್ರಾಂತ ಕುಲಪತಿ ಆರ್. ಶೇಷಶಾಸ್ತ್ರಿ, ಬಿ.ವಿ. ರವಿಕುಮಾರ್, ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.