ಬೆಂಗಳೂರು: ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ಬಳಿಯ ಪುರುಷ ಹಾಗೂ ಮಹಿಳಾ ಶೌಚಾಲಯ ನಡುವೆ ಗೋಡೆ ನಿರ್ಮಿಸುವ ಮೂಲಕ ಮಹಿಳೆಯರಿಗೆ ಆಗುತ್ತಿದ್ದ ಮುಜುಗರವನ್ನು ತಪ್ಪಿಸಲಾಗಿದೆ.
ಟಿಕೆಟ್ ಕೌಂಟರ್ ಬಳಿಯ ಪುರುಷ ಶೌಚಾಲಯದ ಅವ್ಯವಸ್ಥೆ ಕುರಿತು ಲೇಖಕಿ ಕುಸುಮಾ ಆಯರಹಳ್ಳಿ ಅವರು ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ ಪತ್ರಕರ್ತರೊಬ್ಬರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಅಲ್ಲಿಗೆ ತಾತ್ಕಾಲಿಕವಾಗಿ ಪರದೆ ಹಾಕಿಸಿದರು. ನಂತರ ಅಲ್ಲಿ ಗೋಡೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ.
ಇದರಿಂದ ಟಿಕೆಟ್ ಕೌಂಟರ್‌ನಲ್ಲಿನ ಮಹಿಳಾ ಸಿಬ್ಬಂದಿ ಹಾಗೂ ಟಿಕೆಟ್ ಖರೀದಿಸಲು ಸಾಲಿನಲ್ಲಿ ನಿಂತುಕೊಳ್ಳುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ದುರ್ವಾಸನೆ ತಪ್ಪಿದೆ.
‘ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಆದರೆ, ಎಲ್ಲರೂ ನೋಡಿಕೊಂಡು ಸುಮ್ಮನೆ ಇದ್ದರು. ಮೈಸೂರಿಗೆ ತೆರಳುವ ವೇಳೆ ಈ ದೃಶ್ಯ ನೋಡಿ ಅಸಹ್ಯವಾಯಿತು. ಅಧಿಕಾರಿಗಳಿಗೆ ಲಿಖಿತ ದೂರು ಕೊಡಲು ಸಮಯವಿರಲಿಲ್ಲ. ಹಾಗಾಗಿ ತಕ್ಷಣ ಫೋಟೊ ತೆಗೆದು ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಸ್ನೇಹಿತರೊಬ್ಬರು ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿದ್ದಾರೆ. ಇಲಾಖೆ ತಕ್ಷಣ ಸ್ಪಂದಿಸಿರುವುದು ಒಳ್ಳೆಯ ಬೆಳವಣಿಗೆ’ ಎಂದು ಕುಸುಮಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.