ಉಪಗ್ರಹ
ಎಕ್ಸ್ ಚಿತ್ರ
ಬೆಂಗಳೂರು: ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿರುವ ಉಪಗ್ರಹ ಡಿಎಸ್‌ಎಟಿ-1 ಉಡ್ಡಯನ ಮಾಡುವುದಕ್ಕೆ ದಯಾನಂದ ಸಾಗರ ವಿಶ್ವವಿದ್ಯಾಲಯ (ಡಿಎಸ್‌ಯು) ಮುಂದಾಗಿದೆ. ಇಸ್ರೊದ ಪಿಎಸ್‌ಎಲ್‌ವಿ–ಸಿ62 ರಾಕೆಟ್ ಬಳಸಿ ಈ ಉಪಗ್ರಹ ಉಡ್ಡಯನ ಮಾಡಲಾಗುತ್ತದೆ.
ಅಟಲ್ ಇನ್ನೊವೇಶನ್ ಸೆಂಟರ್– ದಯಾನಂದ ಸಾಗರ್ ವಿಶ್ವವಿದ್ಯಾಲಯ (ಎಐಸಿ–ಡಿಎಸ್‌ಯು) ನೆರವಿನಿಂದ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕೇಂದ್ರವನ್ನು ನೀತಿ ಆಯೋಗ ಒದಗಿಸಿರುವ ₹ 10 ಕೋಟಿ ಅನುದಾನದಿಂದ ಸ್ಥಾಪಿಸಲಾಗಿದೆ.
ಡಿಎಸ್‌ಎಟಿ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದಂತೆ ಹಲವು ವೈಶಿಷ್ಟ್ಯ (ವಿವಿಧ ತರಂಗಾಂತರ, ರೇಡಿಯೊ ಬ್ಯಾಂಡ್) ಒಳಗೊಂಡಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾಗಿರುವ ‘ಗ್ರೌಂಡ್ ಸ್ಟೇಷನ್’ನಿಂದ ಈ ಉಪಗ್ರಹಕ್ಕೆ ಸಂದೇಶವನ್ನು (ಎಸ್‌ಎಂಎಸ್) ಕಳುಹಿಸಲಾಗುತ್ತದೆ. ಈ ಸೌಲಭ್ಯವನ್ನು ಧ್ರುವ ಸ್ಪೇಸ್ ಸ್ಥಾಪಿಸಿದೆ. ಇದರಿಂದ ಕಡಿಮೆ ಬ್ಯಾಂಡ್ ವಿಡ್ತ್ ಮೂಲಕ ಸಂವಹನ ಸಾಧ್ಯವಾಗಲಿದೆ. ಉಡ್ಡಯನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು, ಪರೀಕ್ಷೆಗಳು ಪೂರ್ಣಗೊಳಿಸಲಾಗಿದೆ.
ವಿಶ್ವವಿದ್ಯಾಲಯದ ಕುಲಾಧಿಪತಿ ಹೇಮಚಂದ್ರ ಸಾಗರ್, ‘ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಶ್ರಮದ ಫಲವಾಗಿ ಡಿಎಸ್‌ಎಟಿ–1 ಉಡ್ಡಯನಕ್ಕೆ ಸಿದ್ಧಗೊಂಡಿದೆ. ಉಡಾವಣೆಗೆ ವೇದಿಕೆಯನ್ನು ಒದಗಿಸಿದ ಇಸ್ರೊ ಹಾಗೂ ಧ್ರುವ ಸ್ಪೇಸ್‌ಗೆ ಕೃತಜ್ಞರಾಗಿದ್ದೇವೆ. ಡಿಎಸ್‌ಎಟಿ–1 ಕರ್ನಾಟಕದ ದೂರದೃಷ್ಟಿಯ ‘ಅಂತರಿಕ್ಷ ನೀತಿ 2024–2029’ಗೆ ಸಾಕ್ಷಿಯಾಗಿ ನಿಂತಿದೆ’ ಎಂದು ತಿಳಿಸಿದರು.
ಸಹ ಕುಲಾಧಿಪತಿ ಡಿ.ಪ್ರೇಮ್‌ಚಂದ್ರ ಸಾಗರ್, ‘ಉಡಾವಣೆಯ ಬಳಿಕ ವಿಶ್ವವಿದ್ಯಾಲಯದ ‘ಗ್ರೌಂಡ್ ಸ್ಟೇಷನ್’ನಿಂದ ಕಾರ್ಯಾಚರಣೆಗಳನ್ನು ವಿದ್ಯಾರ್ಥಿಗಳು ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ. ಈ ಅವಧಿಯಲ್ಲಿ ಸಂಗ್ರಹವಾಗುವ ದತ್ತಾಂಶವು ಉಪಗ್ರಹ ಸಂವಹನ, ಮಿಷನ್ ಕಾರ್ಯಾಚರಣೆಗಳು ಹಾಗೂ ಅಂತರಿಕ್ಷ ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ನಡೆಸುತ್ತಿರುವ ನಿರಂತರ ಸಂಶೋಧನೆಗೆ ಸಹಕಾರಿಯಾಗಲಿದೆ’ ಎಂದರು.
ಅಹಮದಾಬಾದ್‌ನ ಐಎನ್–ಎಸ್‌ಪಿಎಸಿಇ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ.ಪ್ರಫುಲ್ಲ ಕುಮಾರ್ ಜೈನ್ ಅವರು ದಯಾನಂದ ಸಾಗರ್ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ. ಆರ್. ಜನಾರ್ಧನ್ ಅವರಿಗೆ ಒಪ್ಪಂದ ಪತ್ರ ಹಸ್ತಾಂತರಿಸಿದರು. ಎಐಸಿ–ಡಿಸಿಯು ಸಿಇಒ ವಿನೋದ್ ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.