ADVERTISEMENT

ಗಣ್ಯರಿಗಾಗಿ ಎಲಿವೇಟೆಡ್‌ ಕಾರಿಡಾರ್‌: ವಿಜ್ಞಾನಿ ಟಿ.ವಿ.ರಾಮಚಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 18:51 IST
Last Updated 20 ಜನವರಿ 2019, 18:51 IST
ಟಿ.ವಿ.ರಾಮಚಂದ್ರ ಮಾತನಾಡಿದರು. ಸಿವಿಕ್‌ ಬೆಂಗಳೂರು ಸಮೂಹದ ಟ್ರಸ್ಟಿ ಕಾಂತ್ಯಾಯಿನಿ ಚಾಮರಾಜ್, ಆರ್.ಎಲ್.ಮೌರ್ಯನ್, ಸಂಜೀವ್ ದ್ಯಾಮಣ್ಣನವರ್ ಹಾಗೂ ಆಶೀಶ್ ವರ್ಮಾ ಇದ್ದರು–ಪ್ರಜಾವಾಣಿ ಚಿತ್ರ
ಟಿ.ವಿ.ರಾಮಚಂದ್ರ ಮಾತನಾಡಿದರು. ಸಿವಿಕ್‌ ಬೆಂಗಳೂರು ಸಮೂಹದ ಟ್ರಸ್ಟಿ ಕಾಂತ್ಯಾಯಿನಿ ಚಾಮರಾಜ್, ಆರ್.ಎಲ್.ಮೌರ್ಯನ್, ಸಂಜೀವ್ ದ್ಯಾಮಣ್ಣನವರ್ ಹಾಗೂ ಆಶೀಶ್ ವರ್ಮಾ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ನಿರ್ಮಿಸಲು ಯೋಜಿಸಿರುವ ಎಲಿವೇಟೆಡ್‌ ಕಾರಿಡಾರ್‌ ಮತ್ತು ಉಕ್ಕಿನ ಮೇಲ್ಸೇತುವೆಬೇಡ, ಉಪನಗರ ರೈಲು, ಮೆಟ್ರೊ ರೈಲು ಮತ್ತು ಬಸ್‌ ಸೌಕರ್ಯಗಳು ಬೇಕು ಎಂಬ ಮಾತು ನಗರದಲ್ಲಿ ಮತ್ತೊಮ್ಮೆ ಧ್ವನಿಸಿತು.

ಬೆಂಗಳೂರು ಉಳಿಸಿ ಸಮಿತಿಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಚರ್ಚೆಯಲ್ಲಿ ವಿಷಯ ತಜ್ಞರು ಮತ್ತು ನಗರ ವಾಸಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

‘ಸುಮಾರು ₹ 33 ಸಾವಿರ ಕೋಟಿ ಖರ್ಚು ಮಾಡಿ ಕಟ್ಟುವ, ಕಾಂಕ್ರೀಟ್‌ನ ಕಾರಿಡಾರ್ ನಮಗೆ ಬೇಡ. ಕಡಿಮೆ ದರದಲ್ಲಿ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ, ಕಡಿಮೆ ಮಾಲಿನ್ಯವನ್ನು ಉಂಟು ಮಾಡುವ ರೈಲು ಮತ್ತು ಬಸ್‌ಗಳ ಸಾರ್ವಜನಿಕ ಸಾರಿಗೆಯನ್ನು ವಿಸ್ತರಿಸಿ’ ಎಂದು ಬಹುತೇಕರು ಒತ್ತಾಯಿಸಿದರು.

ADVERTISEMENT

ಐಐಎಸ್ಸಿ ವಿಜ್ಞಾನಿ ಟಿ.ವಿ.ರಾಮಚಂದ್ರ,‘ಎಲಿವೇಟೆಡ್‌ ಕಾರಿಡಾರ್‌ನಿಂದ ಕಾರುಗಳಲ್ಲಿ ಓಡಾಡುವ ಗಣ್ಯರಿಗೆ ಮಾತ್ರ ಹೆಚ್ಚು ಅನುಕೂಲ ಆಗಲಿದೆ.ಇದರ ನಿರ್ಮಾಣದಿಂದ ಖಾಸಗಿ ವಾಹನಗಳ ಬಳಕೆ ಮತ್ತಷ್ಟು ಹೆಚ್ಚಲಿದೆ. ಸಾಮಾನ್ಯರು ದಟ್ಟಣೆಯಲ್ಲಿಯೇ ಸಂಚರಿಸುವ ಸ್ಥಿತಿ ಸೃಷ್ಟಿಯಾಗಲಿದೆ’ ಎಂದು ಹೇಳಿದರು.

‘ಈ ಯೋಜನೆಯಿಂದಾಗುವ ಪಾರಿಸರಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಸರ್ಕಾರ ಸಮೀಕ್ಷೆ ಮಾಡಿಲ್ಲ.ನಗರದ ಶೇ 94 ಪ್ರದೇಶ ಈಗಾಗಲೇ ಕಾಂಕ್ರೀಟ್‌ ಕಾಡಾಗಿದೆ. ಕಾರಿಡಾರ್‌ ಯೋಜನೆಗಾಗಿ ಸುಮಾರು 16,000 ಮರಗಳನ್ನು ಕಡಿಯಬೇಕಾಗುತ್ತದೆ. ಅದರಿಂದ ಆಮ್ಲಜನಕ ಕೊರತೆ, ಮಾಲಿನ್ಯದ ಹೆಚ್ಚಳ, ನಗರದ ತಾಪಮಾನ ಏರಿಕೆ ಆಗಲಿದೆ. ಗುತ್ತಿಗೆದಾರರು ಮತ್ತು ರಾಜಕಾರಣಿಗಳಿಗೆ ಮಾತ್ರ ಲಾಭವಾಗಲಿದೆ’ ಎಂದು ಆರೋಪಿಸಿದರು.

ಸಾರಿಗೆ ತಜ್ಞರೂ ಆಗಿರುವ ಐಐಎಸ್ಸಿ ವಿಜ್ಞಾನಿ ಆಶೀಶ್‌ ವರ್ಮಾ, ‘ಸಂಚರಿಸುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಕಾರಿಡಾರ್‌ ನಿರ್ಮಿಸಲು ಯೋಜಿಸಿದ್ದಾರೆ. ಇದರ ಬದಲಾಗಿ, ಸಂಚರಿಸುವ ಜನರ ಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಸಾರಿಗೆ ಬಲಪಡಿಸಬೇಕಿದೆ. ಇದರಿಂದ ಇಂಧನ ಉಳಿಯುತ್ತದೆ. ಮಾಲಿನ್ಯ ತಗ್ಗುತ್ತದೆ. ನಗರವು ಜೀವಿಸಲು ಯೋಗ್ಯವಾದ ತಾಣವಾಗುತ್ತದೆ’ ಎಂದು ತಿಳಿಸಿದರು.

‘ಬಸ್‌ಗಳ ಸಂಖ್ಯೆ ಹೆಚ್ಚಿಸಲು ಕೇಳಿದರೆ, ಅವುಗಳು ರಸ್ತೆಯ ಹೆಚ್ಚು ಜಾಗವನ್ನು ಆಕ್ರಮಿಸುತ್ತವೆ ಎಂಬ ಉತ್ತರವನ್ನು ಅಧಿಕಾರಿಗಳು ಕೊಡುತ್ತಾರೆ. ಸಂಚಾರದ ವೇಳೆ ನಗರದಲ್ಲಿ ರಸ್ತೆಗಳ 25 ಲಕ್ಷ ಚದರ ಅಡಿ ಜಾಗವನ್ನು ಕಾರುಗಳು, 3 ಲಕ್ಷ ಚ.ಅಡಿ ಜಾಗವನ್ನು ಬೈಕ್‌ಗಳು ಆಕ್ರಮಿಸುತ್ತವೆ. 1.8 ಲಕ್ಷ ಚ. ಅಡಿ ಜಾಗವನ್ನು ಮಾತ್ರ ಬಸ್‌ಗಳು ಆವರಿಸುತ್ತವೆ.

ಬಸ್‌ಗಳು ಆಕ್ರಮಿಸುವ ಸ್ಥಳಕ್ಕಿಂತ 207 ಪಟ್ಟು ಹೆಚ್ಚು ಸ್ಥಳವನ್ನು ಇತರೇ ವಾಹನಗಳು ಆಕ್ರಮಿಸುತ್ತವೆ.ಇದರಿಂದಾಗಿಯೇ ದಟ್ಟಣೆ ಉಂಟಾಗುತ್ತದೆ. ವ್ಯಕ್ತಿಯೊಬ್ಬ ಕಾರಿನಲ್ಲಿ ರಸ್ತೆಗಿಳಿದರೆ 4.8 ಮೀ. ಜಾಗ ಬೇಕಾಗುತ್ತದೆ. ಅದೇ ವ್ಯಕ್ತಿ ಬಸ್‌ ಹತ್ತಿದರೆ 0.38 ಮೀ ರಸ್ತೆಜಾಗ ಸಾಕಾಗುತ್ತದೆ’ ಎಂದು ಅವರು ಸಮೀಕ್ಷೆಯ ಅಂಕಿ–ಅಂಶ ನೀಡಿದರು.

‘ಕಾರಿಡಾರ್‌ನಿಂದ ವಾಹನಗಳು ಹೆಚ್ಚಾಗಿ, ಶೇ 3 ರಷ್ಟು ಇಂಧನ ಬಳಕೆ ಏರಿಕೆಯಾಗುತ್ತದೆ. ಅದೇ ಕಾರಿಡಾರ್‌ನಲ್ಲಿ ಮೆಟ್ರೊ ಮಾರ್ಗ ಬಂದರೆ, ಶೇ 5 ರಷ್ಟು ಇಂಧನ ಬಳಕೆ ಇಳಿಕೆಯಾಗುತ್ತದೆ’ ಎಂದರು.

ಪ್ರಜಾರಾಗ್ ಸಮೂಹದ ಸಂಚಾಲಕ ಸಂಜೀವ್‌ ದ್ಯಾಮಣ್ಣನವರ್‌, ‘ನಗರದ ಏಳು ದಿಕ್ಕುಗಳಲ್ಲಿ ರೈಲು ಮಾರ್ಗಗಳಿವೆ. ಅಲ್ಲಿ ಉಪನಗರ ರೈಲು ಸಾರಿಗೆ ಪರಿಚಯಿಸಬಹುದಾಗಿದೆ. ಅದರಿಂದ 25 ಲಕ್ಷ ಜನರಿಗೆ ಅನುಕೂಲ ಆಗಲಿದೆ. ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣಗೊಂಡು 15 ವರ್ಷ ಕಳೆಯುತ್ತ ಬಂದರೂ, ಅಲ್ಲಿಗೆ ತಲುಪುವ ಮೆಟ್ರೊ ಮಾರ್ಗದ ನಕ್ಷೆಯನ್ನೆ ಅಂತಿಮಗೊಳಿಸಲು ನಮ್ಮ ಅಧಿಕಾರಶಾಹಿಗೆ ಆಗಿಲ್ಲ’ ಎಂದು ವಿಳಂಬ ಧೋರಣೆಯನ್ನು ದೂರಿದರು.

***

ಯಲಹಂಕದಿಂದ ನಗರದ ಕೇಂದ್ರಕ್ಕೆ ಬರಬೇಕಾದರೆ ಎರಡು ತಾಸು ಬೇಕು. ಉಕ್ಕು, ಕಾಂಕ್ರೀಟ್‌, ಹಗ್ಗ, ಬೊಂಬು ಸೇತುವೆ, ಯಾವುದಾದರೂ ಪರವಾಗಿಲ್ಲ. ಮೊದಲು ಸೇತುವೆ ಕಟ್ಟಿ.

ಮಹದೇವ್‌, ಜೀವನ ಬಿಮಾ ನಗರ

*

ಎಲಿವೇಟೆಡ್‌ ಕಾರಿಡಾರನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅದರ ಮೇಲೆ ಸಂಚರಿಸಲು ಸುಂಕ(ಟೋಲ್‌) ಕಟ್ಟುವ ಸ್ಥಿತಿ ಬರಲಿದೆ.

ಆರ್‌.ಎಲ್‌.ಮೌರ್ಯನ್‌, ಸಂಚಾಲಕ, ಬೆಂಗಳೂರು ಉಳಿಸಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.