ADVERTISEMENT

ಬೆಂಗಳೂರು: ‘ದೊಡ್ಡ ಆಲದ ಮರ ಉಳಿಸಿ’ ಮ್ಯಾರಥಾನ್‌ ಜೂನ್‌ 16ಕ್ಕೆ

​ಪ್ರಜಾವಾಣಿ ವಾರ್ತೆ
Published 31 ಮೇ 2024, 15:11 IST
Last Updated 31 ಮೇ 2024, 15:11 IST
ದೊಡ್ಡ ಆಲದ ಮರ
ದೊಡ್ಡ ಆಲದ ಮರ   

ಬೆಂಗಳೂರು: ನಗರದ ಕೇತೋಹಳ್ಳಿ ಗ್ರಾಮದಲ್ಲಿರುವ ದೊಡ್ಡ ಆಲದಮರವನ್ನು ಉಳಿಸಲು ಯುನಿವರ್ಸಲ್‌ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಶನ್‌ ವತಿಯಿಂದ ‘ಯುನಿವರ್ಸಲ್‌ ಮ್ಯಾರಥಾನ್‌‘ ಅನ್ನು ಜೂನ್‌ 16ರಂದು ಬೆಳಿಗ್ಗೆ 6.30ಕ್ಕೆ ಹಮ್ಮಿಕೊಳ್ಳಲಾಗಿದೆ.

‘ದೊಡ್ಡ ಆಲದ ಮರವನ್ನು ಉಳಿಸಿ’ ಘೋಷವಾಕ್ಯದಡಿ ನಡೆಯಲಿರುವ ಈ ಮ್ಯಾರಥಾನ್‌ ಮೈಸೂರು ರಸ್ತೆಯ ರಾಮೋಹಳ್ಳಿ ಕ್ರಾಸ್‌ನಿಂದ ಆರಂಭಗೊಳ್ಳಲಿದೆ. ದೊಡ್ಡ ಆಲದ ಮರದ ಬಳಿ ಕೊನೆಗೊಳ್ಳಲಿದೆ. 

ಆಲದ ಮರ ಮತ್ತು ಆ ಪ್ರದೇಶದ ಅಭಿವೃದ್ಧಿಗಾಗಿ ವರದಿ ಸಲ್ಲಿಸಲು 2019ರಲ್ಲಿ ಪರಿಸರವಾದಿ ಆ.ನ.ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಆಲದ ಮರದ ಆಸುಪಾಸಿನಲ್ಲಿ ಕನಿಷ್ಠ 2.5 ಎಕರೆ ಭೂಮಿ ಸ್ವಾಧೀನಪಡೆದು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಬೇಕು. ತೋಟಗಾರಿಕೆ ಇಲಾಖೆಯು 400 ವರ್ಷಗಳ ಇತಿಹಾಸ ಇರುವ ದೊಡ್ಡ ಆಲದ ಮರ ಮತ್ತು ಸುತ್ತಲಿನ ಪ್ರದೇಶವನ್ನು ಸಂರಕ್ಷಿಸಬೇಕು ಎಂದು ಸಮಿತಿಯು ಸರ್ಕಾರಕ್ಕೆ ವರದಿ ನೀಡಿತ್ತು.

ADVERTISEMENT

ವರದಿಯ ಶಿಫಾರಸು ಜಾರಿಗೊಳಿಸಿ ಪಾರಂಪರಿಕ ಮರವನ್ನು ಉಳಿಸಲು ತೋಟಗಾರಿಕೆ ಇಲಾಖೆ ಮತ್ತು ಡಿಪಿಎಆರ್‌ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ) ಇಲಾಖೆಯ ಗಮನ ಸೆಳೆಯುವುದು ಈ ಮ್ಯಾರಥಾನ್‌ ಆಯೋಜನೆಯ ಉದ್ದೇಶವಾಗಿದೆ. ಮ್ಯಾರಥಾನ್‌ನಲ್ಲಿ 1000 ವಿದ್ಯಾರ್ಥಿಗಳು, ಸ್ಥಳೀಯ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.