ADVERTISEMENT

ಕನ್ನಡ ವಿರೋಧಿ ಎಸ್‌ಬಿಐ ಮ್ಯಾನೇಜರ್‌ ಪ್ರಿಯಾಂಕ ಸಿಂಗ್‌ ವರ್ಗಾವಣೆ

ಬ್ಯಾಂಕ್‌ನ ಅಧಿಕಾರಿ ಧೋರಣೆಗೆ ಸಿ.ಎಂ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಮೇ 2025, 16:20 IST
Last Updated 21 ಮೇ 2025, 16:20 IST
<div class="paragraphs"><p>ಪ್ರಿಯಾಂಕಾ ಸಿಂಗ್</p></div>

ಪ್ರಿಯಾಂಕಾ ಸಿಂಗ್

   

ಚಿತ್ರ: ಎಕ್ಸ್‌

ಬೆಂಗಳೂರು: ಕನ್ನಡ ಮಾತಾಡುವುದೇ ಇಲ್ಲ ಎಂದು ಹೇಳಿ ಆಕ್ರೋಶಕ್ಕೆ ಗುರಿಯಾಗಿದ್ದ  ಸೂರ್ಯಸಿಟಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯ ವ್ಯವಸ್ಥಾಪಕಿ ಪ್ರಿಯಾಂಕ ಸಿಂಗ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಆ ಜವಾಬ್ದಾರಿಯನ್ನು ಕನ್ನಡಿಗರಾದ ಗಿರೀಶ್‌ ಅವರಿಗೆ ಪ್ರಭಾರವಾಗಿ ನೀಡಲಾಗಿದೆ.

ADVERTISEMENT

ಸೂರ್ಯಸಿಟಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಮಂಗಳವಾರ ಅವರು ಗ್ರಾಹಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ‘ಇದು ಭಾರತ, ಹಾಗಾಗಿ ಕನ್ನಡ ಮಾತನಾಡುವುದಿಲ್ಲ’ ಎಂದು ಹಿಂದಿಯಲ್ಲಿ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವಂತೆ ಆರ್‌ಬಿಐ ತಿಳಿಸಿದೆ. ಹಾಗಾಗಿ ಬ್ಯಾಂಕ್‌ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು. ಆದರೆ ಚಂದಾಪುರ ಎಸ್‌ಬಿಐ ಶಾಖೆಯ ಮ್ಯಾನೇಜರ್‌ ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿರುವುದು ಖಂಡನೀಯ ಎಂದು ಗ್ರಾಹಕ, ಕೆಆರ್‌ಎಸ್‌ ಪಕ್ಷದ ಮಹೇಶ್‌ ಆಕ್ಷೇಪ ಎತ್ತಿದ್ದರು.

ಕೆಆರ್‌ಎಸ್‌ ಪಕ್ಷದ ನಾಯಕ ರವಿಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಬ್ಯಾಂಕ್‌ ಎದುರು ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬ್ಯಾಂಕ್‌ ಪರವಾಗಿ ಸಹಾಯಕ ಮಹಾಪ್ರಬಂಧಕ ವಿನಯ್‌ ಪ್ರತಿಭಟನಾ ಸ್ಥಳಕ್ಕೆ ಬಂದು ಬ್ಯಾಂಕ್‌ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಮಂಗಳವಾರ ರಾತ್ರಿಯೇ ಪ್ರಿಯಾಂಕ ಸಿಂಗ್‌ ಅವರನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಲಾಗಿದೆ. ಗಿರೀಶ್‌ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದರು. 

ಸಿದ್ದರಾಮಯ್ಯ ಆಕ್ರೋಶ:

‘ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರನ್ನು ಕಡೆಗಣಿಸಿರುವ ಆನೇಕಲ್ ತಾಲ್ಲೂಕಿನ ಸೂರ್ಯಸಿಟಿಯ ಎಸ್‌ಬಿಐ ಶಾಖಾ ವ್ಯವಸ್ಥಾಪಕರ ವರ್ತನೆ ತೀವ್ರ ಖಂಡನೀಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್‌ಬಿಐನ ತ್ವರಿತ ಕ್ರಮ ಪ್ರಶಂಸನೀಯ.  ಆದರೂ ಇಂತಹ ಘಟನೆಗಳು ಮರುಕಳಿಸಬಾರದು. ಎಲ್ಲ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು’ ಎಂದು ಹೇಳಿದ್ದಾರೆ.

ಬ್ಯಾಂಕ್‌ ಮ್ಯಾನೇಜರ್ ಒಬ್ಬರು ಕನ್ನಡ ಬರುವುದಿಲ್ಲ ಕನ್ನಡದಲ್ಲಿ ಮಾತನಾಡುವುದಿಲ್ಲ ಹಿಂದಿಯಲ್ಲೇ ಮಾತನಾಡಿ ಎಂದು ದರ್ಪ ಮತ್ತು ಅಹಂಕಾರ ತೋರಿದ ಘಟನೆ ಖಂಡನೀಯ
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

‘ಭಾರತದಾದ್ಯಂತ ಎಲ್ಲಾ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಬೇಕು ಎಂದು ನಾನು ಹಣಕಾಸು ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸುತ್ತೇನೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಕನ್ನಡ ವಿರೋಧಿಗಳ ಮೇಲೆ ಕ್ರಮ ಆಗಬೇಕು. ಇದರಲ್ಲಿ ಎರಡು ಮಾತಿಲ್ಲ. ಎಲ್ಲ ಕಡೆ ಕನ್ನಡ ಕಡ್ಡಾಯಗೊಳಿಸಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದ್ದಾರೆ.

‘ಬ್ಯಾಂಕ್‌ಗಳಲ್ಲಿ ಭಾಷಾ ಸೌಹಾರ್ದ ಬೇಕು’

‘ಸ್ಥಳೀಯ ಗ್ರಾಹಕರ ಮೇಲೆ ಅನ್ಯಭಾಷಿಕ ಬ್ಯಾಂಕ್ ಸಿಬ್ಬಂದಿ ಮಾಡುವ ಭಾಷಾ ಪ್ರಹಾರ ತಡೆಯಲು ರಾಷ್ಟ್ರಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ರಾಜ್ಯದ ಎಲ್ಲ ಸಂಸದರು ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಸಂಸದರಿಗೆ ಪತ್ರ ಬರೆದಿರುವ ಅವರು ‘ಯಾವುದೇ ರಾಜ್ಯದ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸ್ಥಳೀಯ ಭಾಷಾ ಜ್ಞಾನದ ಕುರಿತಂತೆ ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣರಾಗಬೇಕು. ಸ್ಥಳೀಯ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರಾಗಬೇಕು. ನೇಮಕಾತಿ ಸಂದರ್ಭದಲ್ಲಿಯೇ ಈ ಷರತ್ತನ್ನು ವಿಧಿಸಬೇಕು. ಈ ಬಗ್ಗೆ ಸಂಸದರು ಸಂಸತ್ತಿನಲ್ಲಿ ಆಗ್ರಹಿಸಬೇಕು’ ಎಂದು ಹೇಳಿದ್ದಾರೆ.  ‘ಚಂದಾಪುರ ಶಾಖೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಎಸ್‌ಬಿಐ ಪ್ರಧಾನ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರತಿಭಟನನಿರತಾ ಕೆಆರ್‌ಎಸ್‌ ಪಕ್ಷದ ನಾಯಕರೊಂದಿಗೆ ಎಸ್‌ಬಿಐ ಅಧಿಕಾರಿ ಮಾತುಕತೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.