ADVERTISEMENT

ನಾಗರತ್ನ ಸೌಹಾರ್ದ ಸೊಸೈಟಿ: ₹ 29.54 ಕೋಟಿ ಅವ್ಯವಹಾರ?

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 20:09 IST
Last Updated 20 ಜೂನ್ 2022, 20:09 IST
   

ಬೆಂಗಳೂರು: ವಿದ್ಯಾಪೀಠ ವೃತ್ತ ಬಳಿಯ ಅಶೋಕನಗರಲ್ಲಿರುವ ನಾಗರತ್ನ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿಯಲ್ಲಿ ₹ 29.54 ಕೋಟಿ ಅವ್ಯವಹಾರ ನಡೆದಿರುವ ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಸೊಸೈಟಿ ಸದಸ್ಯರೂ ಆಗಿರುವ ಠೇವಣಿದಾರ ರಘುನಂದನ್ ಅವರು ಅವ್ಯವಹಾರದ ಬಗ್ಗೆ ದೂರು ನೀಡಿದ್ದಾರೆ. ಅಧ್ಯಕ್ಷೆ ಪರಿಮಳಾ, ಉಪಾಧ್ಯಕ್ಷೆ ರಶ್ಮಿ,ವ್ಯವಸ್ಥಾಪಕ ಆನಂದ್ ತೀರ್ಥ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂಚನಾ
ಹಾಗೂ ನಿರ್ದೇಶಕರು, ಲೆಕ್ಕ ಪರಿಶೋಧಕರು ಸೇರಿದಂತೆ 24 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಪರಾಧ ಸಂಚು (ಐಪಿಸಿ 34), ಕ್ರಿಮಿನಲ್ ಪಿತೂರಿ (ಐಪಿಸಿ 120 ಬಿ), ನಂಬಿಕೆ ದ್ರೋಹ (ಐಪಿಸಿ 406) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಅವ್ಯವಹಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದೂ ತಿಳಿಸಿವೆ.

ADVERTISEMENT

‘ನೂರಾರು ಮಂದಿ ಸೊಸೈಟಿಯಲ್ಲಿ ಹಣ ಠೇವಣಿ ಇರಿಸಿದ್ದಾರೆ. ಅದೇ ಹಣವನ್ನು ಸ್ವರ್ಣ ಭಾರತಿ ಕೋ–ಆಪರೇಟಿವ್ ಬ್ಯಾಂಕ್‌ನಲ್ಲಿ ಇರಿಸಿರುವ ಆರೋಪಿಗಳು, ಈ ಬಗ್ಗೆ ಠೇವಣಿದಾರರಿಗೆ ಯಾವುದೇ ಮಾಹಿತಿ ನೀಡಿಲ್ಲ. ಬ್ಯಾಲೆನ್ಸ್ ಶೀಟ್‌ನಲ್ಲೂ ಈ ಬಗ್ಗೆ ಪ್ರಸ್ತಾಪಿಸಿಲ್ಲವೆಂದು ದೂರುದಾರ ಆರೋಪಿಸಿದ್ದಾರೆ’ ಎಂದೂ ಹೇಳಿವೆ.

‘ಠೇವಣಿದಾರರ ಹಣವನ್ನು ಬೇರೆ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿರುವ ಆರೋಪಿಗಳು ಅಕ್ರಮ ಲಾಭ ಪಡೆದಿದ್ದಾರೆ. ಠೇವಣಿದಾರರಿಗೆ ಹಣ ವಾಪಸು ನೀಡದೇ ನಂಬಿಕೆ ದ್ರೋಹ ಎಸಗಿ ವಂಚಿಸಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ದೂರುದಾರ ಆಗ್ರಹಿಸಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಅವ್ಯವಹಾರ ದೂರಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸೊಸೈಟಿ ಅಧ್ಯಕ್ಷೆ, ನಿರ್ದೇಶಕರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.