ಬೆಂಗಳೂರು: ‘ಹಳ್ಳಿಕಾರ ಸಮುದಾಯದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಸಮುದಾಯದ ಮುಖಂಡರು ₹1 ಕೋಟಿಗೂ ಹೆಚ್ಚು ಹಣವನ್ನು ವಿನಿಯೋಗಿ ಸುತ್ತಿದ್ದಾರೆ. ಮಕ್ಕಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ದೇಶಕ್ಕೆ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ
ನೀಡಿದರು.
ನಗರದಲ್ಲಿ ಆರ್.ಎಂ.ಆರ್.ಹಳ್ಳಿಕಾರ ಫೌಂಡೇಷನ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ‘ಹಳ್ಳಿಕಾರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಮಕ್ಕಳ ಶೈಕ್ಷಣಿಕ ಬೆಳೆವಣಿಗೆಗೆ ಇಂಥದ್ದೊಂದು ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಲ್ಲರ ಬಳಿಯೂ ಹಣವಿರುತ್ತದೆ. ಅದನ್ನು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿನಿಯೋಗಿಸುವ ಟ್ರಸ್ಟ್‌ನ ಕೆಲಸ ಮೆಚ್ಚುವಂಥದ್ದು’ ಎಂದರು.
ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ಟ್ರಸ್ಟ್ ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ, ‘ತಂದೆ–ತಾಯಿಯವರು ಕೂಡಿಟ್ಟಿರುವ ಹಣದಲ್ಲಿ ಸಮಾಜಕ್ಕೆ ಕಿರುಕಾಣಿಕೆ ನೀಡಲಾಗುತ್ತಿದೆ. ಬಡತನದಿಂದಾಗಿ ಹಳ್ಳಿಕಾರ ಸಮುದಾಯದ ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿ ಸುತ್ತಿದ್ದಾರೆ. ಅಂಥ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಲು ಟ್ರಸ್ಟ್ ನೆರವಾಗುತ್ತಿದೆ. ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿ ನೀಡಲಾಗುತ್ತಿದೆ’ ಎಂದು ವಿವರಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ಹಳ್ಳಿಕಾರ ಸಮುದಾಯದ 100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.