ಯಲಹಂಕ: ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಸಿದ 52 ವಿದ್ಯಾರ್ಥಿಗಳಿಗೆ ಒಟ್ಟು ₹ 5.50 ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು. ವಿದ್ಯಾಪೋಷಕರ ಸಂಘ ಕಾರ್ಯಕ್ರಮ ಆಯೋಜಿಸಿತ್ತು.
ವಿದ್ಯಾರ್ಥಿವೇತನ ವಿತರಿಸಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು, ‘ಬರಿಗಾಲಲ್ಲಿ ಬೆಂಗಳೂರಿಗೆ ಬಂದ ನಾನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆಗುವೆನೆಂದು ಕನಸಿನಲಲ್ಲೂ ಯೋಚಿಸಿರಲಿಲ್ಲ. ಇದು ಸಾಧ್ಯವಾಗಿದ್ದು ವಿದ್ಯೆಯಿಂದ. ನೀವೂ ವಿದ್ಯಾವಂತರಾಗಿ ಜೀವನದಲ್ಲಿ ಛಲ, ಶ್ರಮ ಹಾಗೂ ಶ್ರದ್ಧೆಯಿಂದ ಮುನ್ನಡೆದರೆ, ಸಾಧನೆ ಸಾಧ್ಯವಿದೆ’ ಎಂದು ಸಲಹೆ ನೀಡಿದರು.
ವಿದ್ಯಾಪೋಷಕರ ಸಂಘವು ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ವಿದ್ಯಾರ್ಥಿವೇತನ ನೀಡುವ ಮೂಲಕ ಅವರ ಶಿಕ್ಷಣ ಮತ್ತು ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದರಿಂದ ಇತರೆ ವಿದ್ಯಾರ್ಥಿಗಳಿಗೂ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು.
ಪ್ರಗತಿಪರ ರೈತ ಎನ್.ಸಿ.ಪಟೇಲ್, ರಾಜ್ಯ ಬೀಜ ನಿಗಮದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸಯ್ಯ, ದಾನಿಗಳಾದ ಅಶೋಕ್ ಫಾರ್ಮಾ ಸೀಡ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಈರಣ್ಣ, ದಕ್ಷಿಣ ಭಾರತ ಪುಷ್ಪೋದ್ಯಮ ಸಂಘದ ಸದಸ್ಯ ಟಿ.ಎಂ.ಅರವಿಂದ್, ಎಸ್.ಆರ್.ಕೆ ಡೆವಲಪರ್ಸ್‌ನ ಬಿ.ಎಂ.ಕೃಷ್ಣಪ್ಪ, ಮಹದೇವ ಕೊಡಿಗೇಹಳ್ಳಿ ರಾಜಣ್ಣ, ವಿದ್ಯಾಪೋಷಕರ ಸಂಘದ ಅಧ್ಯಕ್ಷ ಶ್ರೀರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಎನ್.ಸಿ.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.