ADVERTISEMENT

ಸರ್ಕಾರಿ ಶಾಲೆಯ ಜಮೀನು ಈಗ ಬಡಾವಣೆ!

*₹125 ಕೋಟಿ ಮೌಲ್ಯದ ಭೂಮಿ ಖಾಸಗಿಯವರ ವಶ *ಹೈಕೋರ್ಟ್‌ ತೀರ್ಪು ನೀಡಿ 9 ವರ್ಷ

ವಿಜಯಕುಮಾರ್ ಎಸ್.ಕೆ.
Published 15 ಸೆಪ್ಟೆಂಬರ್ 2022, 20:08 IST
Last Updated 15 ಸೆಪ್ಟೆಂಬರ್ 2022, 20:08 IST
ಸರ್ಕಾರಿ ಶಾಲೆ ಜಾಗದಲ್ಲೇ ಬಡಾವಣೆ ನಿರ್ಮಾಣವಾಗಿರುವುದು –ಪ್ರಜಾವಾಣಿ ಚಿತ್ರ
ಸರ್ಕಾರಿ ಶಾಲೆ ಜಾಗದಲ್ಲೇ ಬಡಾವಣೆ ನಿರ್ಮಾಣವಾಗಿರುವುದು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಟ್ಟ ಹಲಸೂರಿನ ಸರ್ಕಾರಿ ಶಾಲೆಗೆ ಸೇರಿರುವ ₹125 ಕೋಟಿ ಮೌಲ್ಯದ ಭೂಮಿಯಲ್ಲಿ ಖಾಸಗಿ ವ್ಯಕ್ತಿಗಳು ಬಡಾವಣೆ ನಿರ್ಮಿಸಿದ್ದಾರೆ. ಈ ಭೂಮಿ ಶಾಲೆಗೆ ಸೇರಿದ್ದೆಂದು ಒಂಬತ್ತು ವರ್ಷದ ಹಿಂದೆಯೇ ಹೈಕೋರ್ಟ್ ಆದೇಶಿಸಿದ್ದರೂ ಶಿಕ್ಷಣ ಇಲಾಖೆ ಅದನ್ನು ಮರು ವಶಕ್ಕೆ ಪಡೆಯುವ ಗೋಜಿಗೆ ಹೋಗಿಲ್ಲ.

ಚಿಕ್ಕಜಾಲ ಹೋಬಳಿ ವ್ಯಾಪ್ತಿಯ ಪಾಪನಹಳ್ಳಿ ಸರ್ವೆ ನಂಬರ್ 26ರಲ್ಲಿ 4 ಎಕರೆ 26 ಗುಂಟೆ ಮತ್ತು ಸರ್ವೆ ನಂಬರ್ 46ರಲ್ಲಿ 5 ಎಕರೆ 14 ಗುಂಟೆ ಜಾಗವನ್ನು ಜೋಡಿದಾರ್‌ ಚಂದ್ರಶೇಖರಯ್ಯ ಎಂಬುವರು 1963ರಲ್ಲಿ ಬೆಟ್ಟಹಲಸೂರು ಸರ್ಕಾರಿ ಶಾಲೆಗೆ ದಾನವಾಗಿ ನೀಡಿದ್ದರು. ಅವರ ನಿಧನದ ಬಳಿಕ ಪುತ್ರಿ ಬಿ.ಸಿ.ನಿರ್ಮಲಕುಮಾರಿ ಅವರು ಜಾಗದ ಹಕ್ಕು ಮಂಡಿಸಿ ಬೆಂಗಳೂರು ಉತ್ತರ ತಾಲ್ಲೂಕಿನ ಭೂನ್ಯಾಯ ಮಂಡಳಿ ಮುಂದೆ ಅರ್ಜಿ ಸಲ್ಲಿಸಿದ್ದರು. ನ್ಯಾಯ ಮಂಡಳಿಯು ನಿರ್ಮಲಕುಮಾರಿ ಅವರ ಪರವಾಗಿ ಆದೇಶ ನೀಡಿತ್ತು.

ಈ ಆದೇಶ ಪ್ರಶ್ನಿಸಿ ಬೆಟ್ಟಹಲಸೂರು ಗ್ರಾಮಸ್ಥರು ಹೈಕೋರ್ಟ್‌ ಮೆಟ್ಟಿಲೇರಿದರು. ಭೂನ್ಯಾಯ ಮಂಡಳಿ ಆದೇಶವನ್ನು ತಳ್ಳಿ ಹಾಕಿದ ಹೈಕೋರ್ಟ್‌, ಈ ಜಾಗ ಶಾಲೆಗೆ ಸೇರಬೇಕು ಎಂದು ತೀರ್ಪು ನೀಡಿದೆ. ಈ ನಡುವೆ 4 ಎಕರೆ 26 ಗುಂಟೆ ಜಾಗವನ್ನು ಉಮ್ಮಾರೆಡ್ಡಿ ವೀರೇಂದ್ರಕುಮಾರ್ ಎಂಬುವರಿಗೂ, 5 ಎಕರೆ 14 ಗುಂಟೆ ಜಾಗವನ್ನು ಟೆಲಿಕಾಂ ಎಂಪ್ಲಾಯೀಸ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಗೂ ಮಾರಾಟ ಮಾಡಲಾಗಿತ್ತು.

ADVERTISEMENT

‘ಈ ಜಾಗವನ್ನೂ ಸೇರಿಸಿಕೊಂಡು ಬಡಾವಣೆ ನಿರ್ಮಿಸಿದ್ದ ಸೊಸೈಟಿಯು ನಿವೇಶನ ಅಭಿವೃದ್ಧಿಪಡಿಸಿದೆ. ಹೈಕೋರ್ಟ್‌ ಆದೇಶದ ಅನ್ವಯ ಪಹಣಿಯಲ್ಲಿ ಸರ್ಕಾರಿ ಶಾಲೆ ಎಂದೇ ನಮೂದಾಗುತ್ತಿದೆ. ಆದ್ದರಿಂದ ಬಡಾವಣೆಯ ಒಳಭಾಗದಲ್ಲೇ ಇರುವ ಜಾಗಕ್ಕೆ ಗ್ರಾಮಸ್ಥರು ತಂತಿ ಬೇಲಿ ಮತ್ತು ಫಲಕ ಹಾಕಿಸಿದ್ದೆವು. ಈ ಭೂಮಿ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಹಿತಾಶ್ವರೆಡ್ಡಿ, ‘ಈ ಜಾಗದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ’ ಎಂದು ಹೇಳಿದರು.

‘ಶಾಲೆ ಜಾಗ ರಕ್ಷಣೆಯಲ್ಲಿ ವಿಫಲ’

‘ಒಟ್ಟಾರೆ ₹250 ಕೋಟಿಗೂ ಹೆಚ್ಚು ಬೆಲೆ ಬಾಳುವ ಜಾಗವನ್ನು ಭೂಮಾಫಿಯಾ ಕಬಳಿಸಿದೆ. ಜಾಗ ಇಂದಿಗೂ ಖಾಸಗಿಯವರ ವಶದಲ್ಲೇ ಇದೆ, ವಾಪಸ್ ಪಡೆಯುವ ಯಾವುದೇ ಪ್ರಯತ್ನ ನಡೆದಿಲ್ಲ’ ಎಂದು ಬಿಜೆಪಿ ಮುಖಂಡ ಕೆ.ಎನ್.ಚಕ್ರಪಾಣಿ ದೂರಿದರು.

‘ಉಮ್ಮಾರೆಡ್ಡಿ ವೀರೇಂದ್ರಕುಮಾರ್ ಎಂಬುವವರು 4 ಎಕರೆ 24 ಗುಂಟೆ ಖರೀದಿಸಿದ್ದರು. ಇವರು ಆಂಧ್ರಪ್ರದೇಶದ ರಾಜಕಾರಣಿ ಉಮ್ಮಾರೆಡ್ಡಿ ವೆಂಕಟೇಶ್ವರಲು ಅವರ ಮಗ. ಈ ಜಾಗ ಈಗಲೂ ಅವರ ಸ್ವಾಧೀನದಲ್ಲೇ ಇದೆ. 5 ಎಕರೆ 14 ಗುಂಟೆ ಜಾಗ ಟೆಲಿಕಾಂ ಹೌಸಿಂಗ್ ಸೊಸೈಟಿ ವಶದಲ್ಲೇ ಇದೆ’ ಎಂದು ಹೇಳಿದರು.

‘ಶಾಲೆ ಜಾಗ ಕಬಳಿಸಿದವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.