ADVERTISEMENT

ಜಾಗತಿಕ ನವ ವಿಜ್ಞಾನ ಯೋಜನೆಗಳ ಅನಾವರಣ

‘ವಿಜ್ಞಾನ ಸಮಾಗಮ’ ವಸ್ತು ಪ್ರದರ್ಶನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:09 IST
Last Updated 29 ಜುಲೈ 2019, 20:09 IST
ಗುರುತ್ವದ ಅಲೆಗಳ ಅಧ್ಯಯನ ಮಾಡುವ ‘ಲಿಗೊ’ ಮಾದರಿ ಕುರಿತು ವಿವರಣೆ ನೀಡಿದ ಸಂಶೋಧನಾ ವಿದ್ಯಾರ್ಥಿಗಳು --
ಗುರುತ್ವದ ಅಲೆಗಳ ಅಧ್ಯಯನ ಮಾಡುವ ‘ಲಿಗೊ’ ಮಾದರಿ ಕುರಿತು ವಿವರಣೆ ನೀಡಿದ ಸಂಶೋಧನಾ ವಿದ್ಯಾರ್ಥಿಗಳು --   

ಬೆಂಗಳೂರು:ವಿಶ್ವದೆಲ್ಲೆಡೆಯಿಂದ ಭೂಮಿಯನ್ನು ತಲುಪುವ ಗುರುತ್ವದ ಅಲೆಗಳನ್ನು ಅಧ್ಯಯನ ಮಾಡುವುದು ಹೇಗೆ? ಘನ, ದ್ರವ ಮತ್ತು ಅನಿಲ ನಂತರದ ನಾಲ್ಕನೇ ಸ್ಥಿತಿಯಾದ ಪ್ಲಾಸ್ಮಾದ ಉಪಯೋಗವೇನು? ಹೇಗಿರಲಿದೆ ಭೂಮಿಯ ಒಳಗಿನ ಪ್ರಯೋಗಾಲಯ?

ಇಂತಹ ಕುತೂಹಲದ ಪ್ರಶ್ನೆಗಳಿಗೆ ಸಚಿತ್ರ ಮಾಹಿತಿ ನಿಮಗೆ ಸಿಗಬೇಕು ಎಂದರೆ, ಇಲ್ಲಿನ ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಆಯೋಜಿಸಿರುವ ‘ವಿಜ್ಞಾನ ಸಮಾಗಮ’ ವಸ್ತುಪ್ರದರ್ಶನಕ್ಕೆ ಭೇಟಿ ನೀಡಬಹುದು.ಸೆಪ್ಟೆಂಬರ್‌ 28ರವರೆಗೆ ವಸ್ತುಪ್ರದರ್ಶನ ಇರಲಿದ್ದು, ಪ್ರತಿದಿನಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ವೀಕ್ಷಿಸಬಹುದು.
ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುತ್ತದೆ.

ವಿಶ್ವದ ಏಳು ಪ್ರಮುಖ ವಿಜ್ಞಾನ ಯೋಜನೆಗಳಿಗೆ ದೇಶದ ಕೊಡುಗೆಯನ್ನು ಪ್ರತಿಬಿಂಬಿಸುವ ವಿಜ್ಞಾನ ವಸ್ತುಪ್ರದರ್ಶನ ಇದಾಗಿದೆ.

ADVERTISEMENT

ಭಾರತ–ಅಮೆರಿಕ ಸಹಯೋಗದಲ್ಲಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಗುರುತ್ವದ ಅಲೆ ಸಂವೇದಕದಿಂದ (ಲಿಗೊ – ಲೇಸರ್‌ ಇಂಟರ್‌ಫೆರೊಮೀಟರ್‌ ಗ್ರ್ಯಾವಿಟೇಷನಲ್‌ ವೇವ್‌ ಅಬ್ಸರ್ವೇಟರಿ) ಗುರುತ್ವದ ಅಲೆಯನ್ನು ಯಾವ ರೀತಿ ಅಳೆಯಲಾಗುತ್ತಿದೆ ಎಂಬ ಮಾಹಿತಿ ಈ ಪ್ರದರ್ಶನದಲ್ಲಿದೆ.

ಗುರುತ್ವದ ಅಲೆಗಳು ಬಿಡುಗಡೆಯಾದಾಗ ಬೃಹತ್‌ ಶಕ್ತಿಯನ್ನು ಹೊಂದಿದ್ದರೂ, ಅವು ಭೂಮಿಯನ್ನು ತಲುಪುವಷ್ಟರಲ್ಲಿ ಎಷ್ಟು ಕ್ಷೀಣವಾಗಿರುತ್ತವೆ ಎಂಬುದನ್ನು ಈ ಲಿಗೊ ಸಂವೇದಕದ ಮೂಲಕ ತಿಳಿಯಬಹುದು. ಗುರುತ್ವದ ಅಲೆಗಳ ವೇಗದಲ್ಲಿನ ಸೂಕ್ಷ್ಮ
ವ್ಯತ್ಯಾಸವನ್ನು ಲೇಸರ್‌ ಹಾಗೂ ಮುಂದುವರಿದ ತಂತ್ರಜ್ಞಾನದಿಂದ ಅಳೆಯುವ ಯೋಜನೆ ಇದಾಗಿದೆ.

ಬ್ರಹ್ಮಾಂಡದ ಅಸ್ತಿತ್ವದಲ್ಲಿರುವ ಶೇ 99 ಅಥವಾ ಅದಕ್ಕಿಂತ ಹೆಚ್ಚಿನ ವಸ್ತುವು ಪ್ಲಾಸ್ಮಾ ಸ್ಥಿತಿಯಲ್ಲಿದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ, ಪ್ಲಾಸ್ಮಾ ಗುಣಲಕ್ಷಣಗಳ ಕುರಿತ ಅಧ್ಯಯನವು ತುಂಬಾ ಉಪಯುಕ್ತವಾಗಿದೆ. ಈ ಕುರಿತು ಗುಜರಾತ್‌ನ ಗಾಂಧಿನಗರದಲ್ಲಿರುವ ಪ್ಲಾಸ್ಮಾ ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ ಕಾರ್ಯಗಳ ಪ್ರಾತ್ಯಕ್ಷಿಕೆ ಇಲ್ಲಿದೆ.

ತಮಿಳುನಾಡಿನ ಥೇಣಿಯಲ್ಲಿ ನ್ಯೂಟ್ರಿನೊ ಕಣಗಳ ಗುಣಗಳು ಮತ್ತು ಪ್ರಕ್ರಿಯೆಗಳ ಅಧ್ಯಯನ ನಡೆಸುವ ‘ನ್ಯೂಟ್ರಿನೊ ವೀಕ್ಷಣಾಲಯ’ದ ಕುರಿತು ಮಾಹಿತಿಯನ್ನು ಇಲ್ಲಿ ಪಡೆಯಬಹುದು.

ಈ ವಸ್ತುಪ್ರದರ್ಶನವನ್ನು ರಾಜೀವ್‌ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗದ ಅಧ್ಯಕ್ಷಡಾ. ಅನಿಲ್‌ ಕಾಕೊಡ್ಕರ್‌ ಉದ್ಘಾಟಿಸಿದರು.ವಿಜ್ಞಾನ ಸಮಾಗಮ ಸಮಿತಿಯ ಅಧ್ಯಕ್ಷ ರಣಜಿತ್ ಕುಮಾರ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೆಗಾ-ಸೈನ್ಸ್ ಮತ್ತು ಇನ್‍ಸ್ಪೈರ್ ವಿಭಾಗಗಳ ಮುಖ್ಯಸ್ಥ ಡಾ.ಪ್ರವೀಣ್ ಆಸ್ಥಾನ, ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಸಿಯಂನ ನಿರ್ದೇಶಕ ಮದನ್ ಗೋಪಾಲ್ ಉಪಸ್ಥಿತರಿದ್ದರು.

ವಿಜ್ಞಾನ ಸಮಾಗಮದ ಪ್ರಮುಖ ಕಾರ್ಯಕ್ರಮಗಳನ್ನು ವೆಬ್‍ಸೈಟ್ www.vigyansamagam.in ನಲ್ಲಿ ವೀಕ್ಷಿಸಬಹುದು.

*
ರಾಷ್ಟ್ರೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯವು ಈ ವಸ್ತುಪ್ರದರ್ಶನದಲ್ಲಿ ಪ್ರತಿಬಿಂಬಿತವಾಗಿದೆ.
-ಡಾ. ಅನಿಲ್‌ ಕಾಕೊಡ್ಕರ್‌, ರಾಜೀವ್‌ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.