ADVERTISEMENT

ವಿಪತ್ತು ಉಪಶಮನ ನಿಧಿ ಸ್ಥಾಪನೆ ವಿಳಂಬ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 18:55 IST
Last Updated 19 ಜುಲೈ 2019, 18:55 IST
   

ಬೆಂಗಳೂರು: ‘ಬರ ನಿರ್ವಹಣೆ ಹಾಗೂ ಪರಿಹಾರ ಕಾಮಗಾರಿ ಕೈಗೊಳ್ಳುವ ದಿಸೆ ಯಲ್ಲಿ ರಾಜ್ಯ ಸರ್ಕಾರ ವಿಪತ್ತು ಉಪಶಮನ ನಿಧಿ (ಎಸ್‌ಡಿಎಂಎ-) ಸ್ಥಾಪನೆ ಮಾಡಿಲ್ಲ’ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯ ಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಮಲ್ಲಿಕಾರ್ಜುನ ವಾದ ಮಂಡಿಸಿ, ‘163 ತಾಲ್ಲೂಕುಗಳಲ್ಲಿ ಬರ ಮುಂದುವರಿದಿದೆ. ಗೋಶಾಲೆಗಳಲ್ಲಿ ನೀಡುತ್ತಿರುವ ಮೇವು ಪೌಷ್ಟಿಕವಾಗಿಲ್ಲ’ ಎಂದು ಆಕ್ಷೇಪಿಸಿದರು.

ADVERTISEMENT

ವಿಚಾರಣೆ ಮುಕ್ತಾಯಗೊಳಿಸಿ ಮಧ್ಯಂತರ ಆದೇಶದ ಉಕ್ತಲೇಖನ ಆರಂಭಿಸಿದ ನ್ಯಾಯಪೀಠ, ‘ನಿಧಿ ಸ್ಥಾಪನೆ ಗಾಗಿ ರೂ‍ಪಿಸಲಾದ ಉಪನಿಯಮ 2007ರಲ್ಲಿ ಜಾರಿಗೆ ಬಂದಿದೆ. ಆದರೆ ಕಳೆದ 12 ವರ್ಷಗಳಿಂದ ನಿಧಿ ಸ್ಥಾಪನೆ ಮಾಡಿಲ್ಲ ಎಂಬ ಅಂಶ ಸಮರ್ಥನೀಯವಲ್ಲ’ ಎಂಬ ಅಭಿಪ್ರಾಯವನ್ನು ಮೌಖಿಕವಾಗಿ ವ್ಯಕ್ತಪಡಿಸಿತು.

ಆದೇಶದ ಉಕ್ತಲೇಖನ ಅಪೂರ್ಣ ಗೊಂಡಿದ್ದು, ಇದೇ 22ರಂದು ಮುಂದು ವರಿಯಲಿದೆ.

‘ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆ ಮತ್ತು ಮೇವು ವ್ಯವಸ್ಥೆ ಮಾಡುವಂತೆ ನಿರ್ದೇಶಿಸಬೇಕು’ ಎಂದು ಕೋರಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದ ಎ.ಮಲ್ಲಿಕಾರ್ಜುನ ಹಾಗೂ ಸಾರ್ವಜನಿಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಲ್ಲಿಸಿರುವ ಅರ್ಜಿ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.