ADVERTISEMENT

ಸೀಟ್‌ ಬ್ಲಾಕ್‌ ಹಗರಣ: ಏನು ಕ್ರಮ ಕೈಗೊಂಡಿರಿ?

ಫೇಸ್‌ಬುಕ್‌ನಲ್ಲಿ ಶಂಕರ್‌ ಬಿದರಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 20:17 IST
Last Updated 14 ಫೆಬ್ರುವರಿ 2020, 20:17 IST
ಶಂಕರ ಬಿದರಿ
ಶಂಕರ ಬಿದರಿ   

ಬೆಂಗಳೂರು: ‘ವೈದ್ಯಕೀಯ ಸೀಟ್‌ ಬ್ಲಾಕ್‌ ಮಾಡುವ ದಂಧೆಯಲ್ಲಿ ₹ 1,100 ಕೋಟಿಯ ಹಗರಣ ಆಗಿದೆ ಎಂದು ರಾಜೀವ್‌ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಪತ್ರ ಬರೆದಿದೆ. ರಾಜ್ಯ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆಗಳು ಈ ಬಗ್ಗೆ ಏನು ಕ್ರಮ ಕೈಗೊಂಡಿವೆ’ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್‌ ಬಿದರಿ ಅವರು ಫೇಸ್‌ಬುಕ್‌ನಲ್ಲಿ ಕೇಳಿದ ಪ್ರಶ್ನೆ ಹಲವರ ಹುಬ್ಬೇರುವಂತೆ ಮಾಡಿದೆ.

ಬಿದರಿ ಅವರು ಗುರುವಾರ ನಾಲ್ಕು ಪೋಸ್ಟ್‌ಗಳನ್ನು ಹಾಕಿದ್ದು, 2014ರ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳು ಹಾಗೂ 2019ರಲ್ಲಿ ವಿಶ್ವವಿದ್ಯಾಲಯವು ಸರ್ಕಾರಕ್ಕ ಬರೆದ ಪತ್ರದ ಬಗ್ಗೆ ಉಲ್ಲೇಖಿಸಿದ್ದಾರೆ.

‘ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು ಅಗತ್ಯವಾಗಬಹುದು. 2014ರಲ್ಲಿ ನಡೆದ ಎಂಬಿಬಿಎಸ್‌ ಮತ್ತು ಪಿ.ಜಿ ಸೀಟು ಹಗರಣವನ್ನು ಸಿಐಡಿಗೆ ವಹಿಸಲಾಗಿದ್ದು, ಅದರ ಸ್ಥಿತಿಗತಿ ಏನು? 5 ವರ್ಷ ವ್ಯರ್ಥವಾಗಿ ಹೋಯಿತೇ? ಬಡವರು, ಪ್ರತಿಭಾವಂತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2014ರ ಹಗರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಅವರು ಹೇಳಿದ್ದಾರೆ.

ADVERTISEMENT

‘2019ರ ಸೆಪ್ಟೆಂಬರ್‌ನಲ್ಲಿ ನಾವು ಸರ್ಕಾರದೊಂದಿಗೆ ಯಾವುದೇ ಸಂವಹನ ನಡೆಸಿಲ್ಲ. ಸೀಟ್‌ ಬ್ಲಾಕಿಂಗ್ ಬಗ್ಗೆ ಸರ್ಕಾರದೊಂದಿಗೆ ಈಚೆಗೆ ಮಾಡಿದ ಸಂವಹನವೆಂದರೆ 2018–19ನೇ ಸಾಲಿನ ಪ್ರವೇಶಾತಿಗೆ ಸಂಬಂಧಿಸಿದ್ದು. ಅದು ಸಹ 2018ರ ಆಗಸ್ಟ್‌ಗೆ ಮೊದಲೇ ಹೊರತು ಬಳಿಕವಲ್ಲ’ ಎಂದು ರಾಜೀವ್‌ ಗಾಂಧಿ ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್‌, ‘ಬಿದರಿ ಅವರು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದು ಭರವಸೆ ನೀಡಿದರು.‘ಸೀಟ್ ಬ್ಲಾಕ್‌ ಮಾಡುವುದಕ್ಕೆ ನನ್ನ ವೈಯಕ್ತಿಕ ವಿರೋಧ ಇದೆ. ಶಂಕರ್‌ ಬಿದರಿ ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ ಕುರಿತಂತೆ ದಾಖಲೆಗಳನ್ನು ಒದಗಿಸಿದರೆ ನಾವು ತನಿಖೆ ಆರಂಭಿಸಬಹುದು, ಬಿದರಿ ಅವರು ನನ್ನ ಸ್ನೇಹಿತ, ಅವರೊಂದಿಗೆ ಚರ್ಚೆ ನಡೆಸುತ್ತೇನೆ’ ಎಂದು ಸಚಿವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಶಂಕರ್ ಬಿದರಿ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.