ಬೆಂಗಳೂರು: ಮನೆಗಳಿಂದ ಸಂಗ್ರಹವಾಗುವ ಕಸ, ಆಟೊ ಟಿಪ್ಪರ್‌ಗಳಿಂದ ನೇರವಾಗಿ ವರ್ಗಾವಣೆ ಕೇಂದ್ರಕ್ಕೆ ರವಾನೆಯಾಗಿ, ಅಲ್ಲಿಂದ ಸಂಸ್ಕರಣೆ ಘಟಕಕ್ಕೆ ವಾಸನೆ, ಸೋರಿಕೆ ಇಲ್ಲದೆ ಸಾಗಣೆಯಾಗುವ ನಗರದಲ್ಲಿನ ‘ಸೆಕೆಂಡರಿ ಟ್ರಾನ್ಸ್‌ಫರ್ ಸ್ಟೇಷನ್’ಗಳು (ಎಸ್‌ಟಿಎಸ್) ರಾಜ್ಯಕ್ಕಷ್ಟೇ ಅಲ್ಲ, ದೇಶದ 20ಕ್ಕೂ ಹೆಚ್ಚು ಪಾಲಿಕೆಗಳಿಗೆ ಮಾದರಿಯಾಗಿವೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ವತಿಯಿಂದ ಈಜಿಪುರ– ಕೋರಮಂಗಲದಲ್ಲಿ 2024ರ ಮಾರ್ಚ್‌ನಲ್ಲಿ ಎಸ್‌ಟಿಎಸ್ ಆರಂಭವಾಯಿತು. ‘ಪರಿಶುದ್ಧ್ ವೆಂಚರ್ಸ್’ ನಿರ್ವಹಿಸುತ್ತಿರುವ ಈ ಘಟಕದ ಯಶಸ್ಸಿನಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಎಸ್‌ಟಿಎಸ್‌ಗಳನ್ನು ಸ್ಥಾಪಿಸಲು ಬಿಎಸ್‌ಡಬ್ಲ್ಯುಎಂಎಲ್ ನಿರ್ಧರಿಸಿದೆ.
ರಾಜ್ಯದ ಕೆಲವು ಪಾಲಿಕೆಗಳಲ್ಲದೆ, ಲಖನೌ, ಭುವನೇಶ್ವರ, ವೈಜಾಗ್, ಗ್ಯಾಂಗ್ಟಕ್, ತಂಬರಂ, ಕೊಚ್ಚಿ, ಜುನಾಗಢ, ಪಟಿಯಾಲ, ಚೆನ್ನೈ ಸೇರಿದಂತೆ ದೇಶದ ವಿವಿಧೆಡೆಯ 20ಕ್ಕೂ ಹೆಚ್ಚು ಪಾಲಿಕೆಗಳ ಪ್ರತಿನಿಧಿಗಳು ‘ಪರಿಶುದ್ಧ್ ವೆಂಚರ್ಸ್’ ಎಸ್‌ಟಿಎಸ್‌ಗೆ ಭೇಟಿ ನೀಡಿ, ಅಂತಹದ್ದೇ ಘಟಕಗಳನ್ನು ತಮ್ಮ ನಗರಗಳಲ್ಲಿ ಸ್ಥಾಪಿಸಿಕೊಳ್ಳಲು ಸಲಹೆ ಹಾಗೂ ಯೋಜನೆಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಫಿಲಿಪ್ಪೀನ್ಸ್‌ನ ಮೇಯರ್, ಜರ್ಮನಿಯ ಸಂಸದರ ನಿಯೋಗ, ಇಂಡೋನೇಷ್ಯಾದ ಬಾಲಿ, ಕತಾರ್ ನಗರಗಳ ಪ್ರತಿನಿಧಿಗಳು ಘಟಕಕ್ಕೆ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ. ಯೋಜನೆ ವಿವರಗಳನ್ನು ಪಡೆದುಕೊಂಡಿದ್ದು, ಅಲ್ಲಿ ಸ್ಥಾಪಿಸಲು ನೆರವಾಗಬೇಕೆಂದು ಕೋರಿದ್ದಾರೆ ಎಂದು ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಈಜಿಪುರವಲ್ಲದೆ, ಚಾಮರಾಜಪೇಟೆಯ ಬಿನ್ನಿಪೇಟೆಯಲ್ಲಿ ಎಸ್‌ಟಿಎಸ್ ಕಾರ್ಯನಿರ್ವಹಿಸುತ್ತಿದೆ. ಸರ್ವಜ್ಞನಗರದಲ್ಲಿ ಈಗಾಗಲೇ ಘಟಕ ಉದ್ಘಾಟನೆಗೆ ಸಿದ್ಧವಾಗಿದೆ. ಮಿಲ್ಲರ್ಸ್ ರಸ್ತೆಯಲ್ಲಿರುವ ಬಿಎಸ್‌ಡಬ್ಲ್ಯುಎಂಎಲ್ ಕಚೇರಿಯ ಹಿಂಭಾಗದಲ್ಲಿ ಎಸ್‌ಟಿಎಸ್ ನಿರ್ಮಾಣವಾಗುತ್ತಿದೆ. ಇವುಗಳಲ್ಲದೆ, ಹೊಸದಾಗಿ 23 ಎಸ್‌ಟಿಎಸ್‌ಗಳನ್ನು ನಿರ್ಮಿಸಲು, ಬಿಎಸ್‌ಡಬ್ಲ್ಯುಎಂಎಲ್ ಟೆಂಡರ್ ಕರೆದಿದ್ದು, ಸದ್ಯದಲ್ಲಿಯೇ ಬಿಡ್ ತೆರೆಯಲಿದೆ.
ಕಾರ್ಯವಿಧಾನ: ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯ ಆಟೊ ಟಿಪ್ಪರ್‌ಗಳ ಮೂಲಕ ನೇರವಾಗಿ ಎಸ್‌ಟಿಎಸ್ ಘಟಕಕ್ಕೆ ಬರಲಿದೆ. ಸಿ.ಸಿ ಟಿ.ವಿ ಕ್ಯಾಮೆರಾ ನಿಗಾದಲ್ಲಿ ಆಟೊದ ಬರುವಿಕೆಯಿಂದ ಹಿಡಿದು, ಅದರ ರೂಟ್ ನಂಬರ್, ಸಂಖ್ಯಾಫಲಕ, ತ್ಯಾಜ್ಯದ ತೂಕ ಎಲ್ಲವೂ ವೆಬ್‌ಸೈಟ್‌ನಲ್ಲಿ ದಾಖಲಾಗಲಿದೆ. ಆಟೊದಿಂದ ನೇರವಾಗಿ ‘ಇಂಧನ ಸಾಗಿಸುವ ಕಂಟೈನರ್’ಗಳ ಮಾದರಿಯಲ್ಲಿರುವ ‘ಕ್ಯಾಪ್ಸೂಲ್’ಗಳಿಗೆ ತ್ಯಾಜ್ಯ ರವಾನೆಯಾಗುತ್ತದೆ. ದ್ರವ–ತ್ಯಾಜ್ಯವನ್ನು ಹೊರಹಾಕಿ, ಕಂಪ್ರೆಸ್ ಮಾಡಿ ತುಂಬಲಾಗುತ್ತದೆ. ‘ಕ್ಯಾಪ್ಸೂಲ್’ಗಳ ತಳಭಾಗದಲ್ಲೂ ದ್ರವ–ತ್ಯಾಜ್ಯ ಹೆಚ್ಚಿನ ಸಂಗ್ರಹಕ್ಕೆ ಅವಕಾಶವಿದೆ. ಇದನ್ನು ಜಿಪಿಎಸ್ ನಿಯಂತ್ರಣದಲ್ಲಿರುವ ಟ್ರಕ್‌ಗಳ ಮೂಲಕ ಸಂಸ್ಕರಣೆ ಘಟಕಗಳಿಗೆ ರವಾನಿಸಲಾಗುತ್ತದೆ.
ಸುಮಾರು 16 ಟನ್ ತ್ಯಾಜ್ಯ ಒಂದೇ ‘ಕ್ಯಾಪ್ಸೂಲ್’ನಲ್ಲಿ ರವಾನೆಯಾಗುತ್ತದೆ. ಇದು ಯಾವುದೇ ರೀತಿಯ ದ್ರವ–ತ್ಯಾಜ್ಯ, ವಾಸನೆಯನ್ನೂ ಹೊರಹಾಕುವುದಿಲ್ಲ. ಅಲ್ಲದೆ, ಆಟೊದಿಂದ ತ್ಯಾಜ್ಯವನ್ನು ‘ಕ್ಯಾಪ್ಸೂಲ್’ ಒಳಗೆ ಸೇರಿಸುವ ಅವಧಿಯಲ್ಲೂ ವಾಸನೆಯು ಸ್ಟೇಷನ್‌ನಿಂದ ಹೊರಹೋಗದಂತೆ ಜೈವಿಕ ದ್ರವವನ್ನು ಸಿಂಪಡಿಸಲಾಗುತ್ತದೆ. ಒಣ ತ್ಯಾಜ್ಯ ಹಾಗೂ ಮಿಶ್ರ ತ್ಯಾಜ್ಯದ ವಿಂಗಡಣೆ, ಸಾಗಣೆಗೂ ಎಸ್‌ಟಿಎಸ್‌ನಲ್ಲಿ ಅವಕಾಶವಿದೆ. ಈಜಿಪುರದಲ್ಲಿರುವ ಎಸ್‌ಟಿಎಸ್‌ನಲ್ಲಿ ಪ್ರತಿದಿನ ಏಳು ವಾರ್ಡ್‌ಗಳ ಸುಮಾರು 160 ಟನ್ ತ್ಯಾಜ್ಯ ವಿಲೇವಾರಿಯಾಗುತ್ತಿದೆ.
ಹೊಸ ಎಸ್‌ಟಿಎಸ್ ಘಟಕ ಸ್ಥಾಪಿಸಲು ಬಿಬಿಎಂಪಿ 25 ಸಾವಿರ ಚದರಡಿ ಜಾಗವನ್ನು ನೀಡಲಿದ್ದು, ಟರ್ನ್‌ಕೀ ಆಧಾರದಲ್ಲಿ ನಿಗದಿಯಾದ ದರದಲ್ಲಿ, ಎಸ್‌ಟಿಎಸ್‌ಗಳನ್ನು ವಿನ್ಯಾಸಗೊಳಿಸಿ, ನಿರ್ಮಾಣ ಮಾಡಿ, ಸರಬರಾಜು, ಅಳವಡಿಕೆ, ನಿರ್ವಹಣೆಯನ್ನು ಗುತ್ತಿಗೆದಾರರು ಮಾಡಬೇಕಾಗುತ್ತದೆ ಎಂದು ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ತಿಳಿಸಿದರು.
ಹೆಚ್ಚು ನಿಖರ ವಾಸನೆರಹಿತ: ಕರೀಗೌಡ ‘ಎಸ್‌ಟಿಎಸ್‌ಗಳ ನಿರ್ಮಾಣದಿಂದ ತ್ಯಾಜ್ಯ ನಿರ್ವಹಣೆ ಸಾಗಣೆ ಹೆಚ್ಚು ನಿಖರವಾಗುತ್ತದೆ. ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯ ಆಟೊ ಟಿಪ್ಪರ್‌ಗಳಿಂದ ನೇರವಾಗಿ ಎಸ್‌ಟಿಎಸ್‌ಗೆ ಹೋಗುವುದರಿಂದ ರಸ್ತೆಯಲ್ಲಿ ಕಾಂಪ್ಯಾಕ್ಟರ್‌ಗೆ ಕಸ ವರ್ಗಾಯಿಸುವ ಪ್ರಕ್ರಿಯೆ ಇರುವುದಿಲ್ಲ. ಎಸ್‌ಟಿಎಸ್‌ಗಳು ವಾಸನೆರಹಿತವಾಗಿ ಕಾರ್ಯನಿರ್ವಹಿಸಲಿದ್ದು ಕ್ಯಾಪ್ಯೂಲ್‌ಗಳಲ್ಲಿ ಸಾಗಣೆಯಾಗುವ ತ್ಯಾಜ್ಯದಿಂದ ದ್ರವತ್ಯಾಜ್ಯ ಸೋರಿಕೆಯೂ ಆಗುವುದಿಲ್ಲ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ತಿಳಿಸಿದರು.
ಎಸ್‌ಟಿಎಸ್ ಸ್ಥಾಪನೆ ಉದ್ದೇಶ
* ಘನತ್ಯಾಜ್ಯ ನಿರ್ವಹಣೆ ನಿಯಮ– 2016 ಅನುಷ್ಠಾನ
* ದಕ್ಷ ಯಾಂತ್ರೀಕರಣದಿಂದ ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಗುಣಮಟ್ಟ ವೃದ್ಧಿ
* ಪಾಲಿಕೆ ವ್ಯಾಪ್ತಿಯಿಂದ ತ್ಯಾಜ್ಯ ಸಂಗ್ರಹ ಮತ್ತು ವರ್ಗಾವಣೆ
* ಸ್ವಚ್ಛ ಮತ್ತು ನೈರ್ಮಲ್ಯಯುಕ್ತ ಸಾಗಣೆ ವ್ಯವಸ್ಥೆ
* ರಸ್ತೆಗಳಲ್ಲಿ ತ್ಯಾಜ್ಯ ವರ್ಗಾವಣೆ ಮುಕ್ತ/ ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ
* ಕಾಂಪ್ಯಾಕ್ಟರ್‌ಗಳಿಂದ ರಸ್ತೆಯಲ್ಲಿ ದ್ರವತ್ಯಾಜ್ಯ (ಲಿಚೆಟ್) ಸುರಿಯದಂತೆ ಕ್ರಮ
* ತ್ಯಾಜ್ಯ ನಿರ್ವಹಣೆಯಲ್ಲಿ ಮಾನವ ಸ್ಪರ್ಶವನ್ನು ಕಡಿತಗೊಳಿಸುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.