ADVERTISEMENT

ಪಾದರಾಯನಪುರಕ್ಕೆ ಕಾವಲು: ಗೃಹ ಸಚಿವ ಬೊಮ್ಮಾಯಿ ಭೇಟಿ

ಆಹಾರ, ದಿನಸಿ ಪೂರೈಸದ ಬಿಬಿಎಂಪಿ; ಗಲಾಟೆ ಸುಳಿವು ನೀಡಿದ್ದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 20:30 IST
Last Updated 20 ಏಪ್ರಿಲ್ 2020, 20:30 IST
ಭಾನುವಾರ ರಾತ್ರಿ ನಡೆದ ದಾಂದಲೆ ಹಿನ್ನೆಲೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಅಧಿಕಾರಿಗಳೊಂದಿಗೆ ಪಾದರಾಯನಪುರದ ಮುಖ್ಯ ರಸ್ತೆಗಳನ್ನು ಸೋಮವಾರ ವೀಕ್ಷಣೆ ಮಾಡಿದರು -  – ಪ್ರಜಾವಾಣಿ ಚಿತ್ರ
ಭಾನುವಾರ ರಾತ್ರಿ ನಡೆದ ದಾಂದಲೆ ಹಿನ್ನೆಲೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಅಧಿಕಾರಿಗಳೊಂದಿಗೆ ಪಾದರಾಯನಪುರದ ಮುಖ್ಯ ರಸ್ತೆಗಳನ್ನು ಸೋಮವಾರ ವೀಕ್ಷಣೆ ಮಾಡಿದರು -  – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆದಿದ್ದ ಪಾದರಾಯನಪುರ ವಾರ್ಡ್‌ನಲ್ಲಿ ಕಾವಲಿಗಾಗಿಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ.

ಹೆಚ್ಚು ‘ಕೋವಿಡ್–19’ ಸೋಂಕಿತರು ಕಂಡುಬಂದಿದ್ದರಿಂದ ಪಾದರಾಯನಪುರ ಹಾಗೂ ಬಾಪೂಜಿನಗರವನ್ನು ಇತ್ತೀಚೆಗಷ್ಟೇ ಸೀಲ್‌ಡೌನ್‌ ಮಾಡಲಾಗಿತ್ತು. ಅಷ್ಟಾದರೂ ಜನ ಓಡಾಡುತ್ತಿದ್ದರು. ಸ್ಥಳೀಯ ಠಾಣೆ ಪೊಲೀಸರು ಭದ್ರತೆಯೂ ಅಷ್ಟಕ್ಕಷ್ಟೇ ಇತ್ತು.

ಭಾನುವಾರ ರಾತ್ರಿ ನಡೆದ ಘಟನೆ ದೇಶದಾದ್ಯಂತ ಸುದ್ದಿಯಾಗಿದ್ದು, ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಶಸ್ತ್ರಸಜ್ಜಿತ ಪೊಲೀಸರೇ ಪಾದರಾಯನಪುರದಲ್ಲಿ ಗಸ್ತು ತಿರುಗುತ್ತಿದ್ದಾರೆ.

ADVERTISEMENT

ಸೀಲ್‌ಡೌನ್‌ ಬಳಿಕವೂ ಸ್ಥಳೀಯರು ರಾಜಾರೋಷವಾಗಿ ಮನೆಯಿಂದ ಹೊರಗೆ ಬಂದು ಓಡಾಡುತ್ತಿದ್ದರು. ಇದೀಗ ವಾರ್ಡ್‌ನಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಪ್ರತಿಯೊಂದು ಮನೆಗಳ ಮೇಲೂ ಕಣ್ಣಿಟ್ಟಿದ್ದಾರೆ. ಇದರಿಂದಾಗಿ ಸೋಮವಾರ ಯಾರೊಬ್ಬರೂ ಮನೆಯಿಂದ ಹೊರಗೆ ಬರಲಿಲ್ಲ. ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ವಾಪಸು ಕಳುಹಿಸಿದರು.

‘ತುರ್ತು ಸಂದರ್ಭಗಳಲ್ಲಿ ಕೆಲಸ ಮಾಡುವ ‘ಗರುಡ’ ಪಡೆ ಹಾಗೂ ಕ್ಷಿಪ್ರ ಕಾರ್ಯಪಡೆ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಉಳಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮೂವರು ಡಿಸಿಪಿಗಳು ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಆಹಾರ ಪೂರೈಸದ ಬಿಬಿಎಂಪಿ: ‘ಸೀಲ್‌ಡೌನ್‌ ಬಳಿಕ ಪ್ರತಿಯೊಂದು ಮನೆಗೂ ಆಹಾರ, ದಿನಸಿ ಸೇರಿ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ, ಅದನ್ನು ಈಡೇರಿಸಲಿಲ್ಲ. ಇದರಿಂದ ಜನ, ಅಗತ್ಯ ವಸ್ತುಗಳಿಗಾಗಿ ಹೊರಗಡೆ ಬಂದರು’ ಎಂದು ನಿವಾಸಿಯೊಬ್ಬರು ಹೇಳಿದರು.

‘ಪಕ್ಷ ಹಾಗೂ ಜಾತಿ ಆಧಾರದಲ್ಲಿ ಹಾಲು–ದಿನಸಿ ವಿತರಣೆಯೂ ಅಲ್ಲಲ್ಲಿ ಆಯಿತು. ಇದು ಜನರ ಆಕ್ರೋಶಕ್ಕೆ ಕಾರಣವಾಯಿತು. ಭಾನುವಾರ ಬೆಳಿಗ್ಗೆ ಎಲ್ಲಿಯೂ ಹಾಲು ಸಿಕ್ಕಿರಲಿಲ್ಲ. ಸಿಟ್ಟಾದ ಕೆಲ ಮಹಿಳೆಯರು, ಠಾಣೆಗೆ ಹೋಗಿ ಹಾಲಿನ ಪೊಟ್ಟಣಗಳ ವ್ಯವಸ್ಥೆ ಮಾಡುವಂತೆ ಕೇಳಿದ್ದರು. ಹಾಲು ಸಿಗದಿದ್ದರೆ ಮಕ್ಕಳನ್ನು ಸಾಕುವುದು ಹೇಗೆ ಎಂದು ಪ್ರಶ್ನಿಸಿದರು. ಪೊಲೀಸರು, ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರು. ಆದರೆ, ಅಧಿಕಾರಿಗಳು ಉಡಾಫೆ ಉತ್ತರ ನೀಡಿದರು. ಅದುವೇ ಸ್ಥಳೀಯರನ್ನು ಮತ್ತಷ್ಟು ಕೆರಳಿಸಿತ್ತು’ ಎಂದರು.

ಗಲಾಟೆ ಸುಳಿವು ನೀಡಿದ್ದ ಪೊಲೀಸರು: ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಬೀಡಿ ಕಟ್ಟುವ ಕಾರ್ಮಿಕರೇ ಈ ಪ್ರದೇಶದಲ್ಲಿ ಹೆಚ್ಚಿದ್ದಾರೆ. ಅವರೆಲ್ಲರೂ ದಿನದ ದುಡಿಮೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅಂಥವರಿಗೆ ಸಮರ್ಪಕವಾಗಿ ಅಗತ್ಯ ವಸ್ತುಗಳು ಸಿಕ್ಕಿರಲಿಲ್ಲ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಮಾಹಿತಿಯನ್ನೂ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸೀಲ್‌ಡೌನ್‌ನಲ್ಲಿ ಎಲ್ಲ ಜನರಿಗೂ ಸಮಾನವಾಗಿ ಆಹಾರ, ದಿನಸಿ ವಿತರಿಸಿ. ಇಲ್ಲದಿದ್ದರೆ, ಹಸಿವಿನಿಂದ ಎಲ್ಲರೂ ರೊಚ್ಚಿಗೇಳುತ್ತಾರೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ’ ಎಂಬುದಾಗಿ ಪೊಲೀಸರು, ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದ್ದರು. ಅದಕ್ಕೆ ಅಧಿಕಾರಿಗಳು ಕ್ಯಾರೆ ಎಂದಿರಲಿಲ್ಲ’ ಎಂದು ಮೂಲಗಳು ಹೇಳಿವೆ.

ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಜಂಟಿ ಕಮಿಷನರ್ ಸಂದೀಪ್ ಪಾಟೀಲ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ಪೊಲೀಸರಿಗೂ ಕೊರೊನಾ ಆತಂಕ

ಗಲಾಟೆ ನಡೆದ ವೇಳೆ ಸ್ಥಳದಲ್ಲಿದ್ದ ಹಾಗೂ ಗಲಾಟೆ ನಿಯಂತ್ರಿಸಲು ಸ್ಥಳಕ್ಕೆ ಹೋದ ಪೊಲೀಸರಿಗೂ ಇದೀಗ ಕೊರೊನಾ ಆತಂಕ ಕಾಡತೊಡಗಿದೆ.

ಕೋವಿಡ್–19 ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದ ಶಂಕಿತರೂ ಗಲಾಟೆ ವೇಳೆ ಸ್ಥಳದಲ್ಲಿ ಇದ್ದರು. ಅವರನ್ನೆಲ್ಲ ಪೊಲೀಸರು ಮೈ – ಕೈ ಮುಟ್ಟಿ ಹಾಗೂ ಲಾಠಿಯಿಂದ ಹೊಡೆದು ಚದುರಿಸಿದ್ದಾರೆ. ಶಂಕಿತರು ಓಡಾಡಿದ್ದ ಸ್ಥಳದಲ್ಲೆಲ್ಲ ಪೊಲೀಸರೂ ಓಡಾಡಿದ್ದಾರೆ. ಕ್ವಾರಂಟೈನ್‌ನಲ್ಲಿರವ ಶಂಕಿತರ ತಪಾಸಣೆ ವರದಿ ಬರುವುದನ್ನೇ ಎಲ್ಲರೂ ಕಾಯುತ್ತಿದ್ದಾರೆ.

ಜೊತೆಗೆ, ಸೋಮವಾರ ಬೆಳಿಗ್ಗೆ ಪಾದರಾಯನಪುರದ ಬಹುತೇಕ ಪ್ರದೇಶಗಳಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಯಿತು. ಬಳಿಕವೇ ಗೃಹ ಸಚಿವರು ಹಾಗೂ ಇತರೆ ರಾಜಕೀಯ ಮುಖಂಡರು ಸ್ಥಳಕ್ಕೆ ಬಂದರು.

ಪ್ರದೇಶದಲ್ಲಿ ಓಡಾಡಿದ್ದ ವಾಹನಗಳಿಗೂ ದ್ರಾವಣ ಸಿಂಪಡಿಸಲಾಯಿತು. ಪಾದರಾಯನಪುರದಲ್ಲಿ ಕೆಲಸ ಮಾಡುವ ಪೊಲೀಸರಿಗೆ ಗುಣಮಟ್ಟದ ಮಾಸ್ಕ್‌ ಧರಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಸ್ಥಳೀಯ ರಾಜಕೀಯದ ನಂಟು

‘ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದರಾಯಪುರ ವಾರ್ಡ್‌ ಇದೆ. ಈ ವಾರ್ಡ್‌ ಸದಸ್ಯ, ಮುಂಬರುವ ಚುನಾವಣೆಯಲ್ಲಿ ಶಾಸಕ ಸ್ಥಾನದ ಆಕಾಂಕ್ಷಿ. ಹೀಗಾಗಿಯೇ ಸ್ಥಳೀಯವಾಗಿ ಎರಡು ಗುಂಪುಗಳು ಹುಟ್ಟಿಕೊಂಡಿದ್ದು, ಅವುಗಳಿಂದಲೇ ಇಂಥ ಘಟನ ನಡೆಯುತ್ತಿವೆ’ ಎಂದು ಹಿರಿಯ ನಿವಾಸಿಯೊಬ್ಬರು ಹೇಳಿದರು.

‘ಕೋವಿಡ್–19’ ಸೋಂಕಿತ ಮಹಿಳೆಯೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದಾರೆ. ಬಹುತೇಕ ಸಂಬಂಧಿಕರು ಯಾರೂ ಅಂತ್ಯಕ್ರಿಯೆಗೆ ಹೋಗಿರಲಿಲ್ಲ. ಶಾಸಕರೇ ಮುಂದೆ ನಿಂತು ಅಂತ್ಯಕ್ರಿಯೆ ಮಾಡಿಸಿದ್ದಾರೆ. ಈ ವಿಚಾರವಾಗಿಯೇ ವಾರ್ಡ್‌ನಲ್ಲಿ ಹೆಚ್ಚು ಚರ್ಚೆ ನಡೆಯುತ್ತಿತ್ತು. ಅದರ ನಡುವೆಯೇ ಈ ಗಲಾಟೆ ಆಗಿದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

ಒಂದೇ ಕೊಠಡಿ ಮನೆ; ಪಾಳಿಯಲ್ಲಿ ಮಲಗುವ ಜನ

‘ಪಾದರಾಯನಪುರ ಹಾಗೂ ಬಾಪೂಜಿನಗರದಲ್ಲಿ ಒಂದು ಕೊಠಡಿಯ ಮನೆಗಳೇ ಹೆಚ್ಚಿವೆ. ಲಾಕ್‌ಡೌನ್‌ಗೂ ಮುನ್ನ ಕೆಲವರು ಎರಡು ಪಾಳಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅದೇ ರೀತಿಯಲ್ಲೇ ಅವರು ಪಾಳಿ ಪ್ರಕಾರವೇ ಮನೆಯಲ್ಲಿ ಮಲಗುತ್ತಿದ್ದರು. ಲಾಕ್‌ಡೌನ್‌ ಹಾಗೂ ಸೀಲ್‌ಡೌನ್‌ ಆದ ಮೇಲೆ ಅವರ ಸ್ಥಿತಿಯೇ ಚಿಂತಾಜನಕವಾಗಿದೆ’ ಎಂದು ಸ್ಥಳೀಯ ನಿವಾಸಿ ಹೇಳಿದರು.

‘ಬೆಳಿಗ್ಗೆಯಿಂದ ಸಂಜೆವರೆಗೂ ಒಬ್ಬರು ಮಲಗಿದರೆ, ರಾತ್ರಿಯಿಂದ ಬೆಳಿಗ್ಗೆವರೆಗೆ ಬೇರೆಯವರು ಮಲಗುತ್ತಿದ್ದರು. ಈಗ ಅವರೆಲ್ಲ ಬೀದಿಯಲ್ಲಿ ಮಲಗುತ್ತಿದ್ದಾರೆ. ಇಂಥವರಿಗೂ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದರು.

ಗೃಹ ಸಚಿವರಿಂದ ಅಧಿಕಾರಿಗಳಿಗೆ ತರಾಟೆ

ಘಟನಾ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೆಂದು ಮುಖರ್ಜಿ ಹಾಗೂ ಪಶ್ಚಿಮ ವಿಭಾಗದ ಡಿಸಿಪಿ ಬಿ.ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ, ‘ಸೀಲ್‌ಡೌನ್‌ ಮಾಡಿ ಎಷ್ಟು ದಿನವಾಗಿದೆ. ಇಲ್ಲಿ ಭದ್ರತೆ ಏಕೆ ಬಿಗಿಗೊಳಿಸಿಲ್ಲ’ ಎಂದು ಪ್ರಶ್ನಿಸಿದರು. ‘ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಿ’ ಎಂದೂ ಎಚ್ಚರಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಬೊಮ್ಮಾಯಿ, ‘ಹೆಚ್ಚುವರಿ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಕೃತ್ಯ ಎಸಗಿರುವ ಹಾಗೂ ಅವರ ಹಿಂದಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ಪಾದರಾಯನಪುರದ ಘಟನೆಗೆ ಕೆಎಫ್‌ಡಿಯ ಕೆಲವರು ಪ್ರಚೋದನೆ ನೀಡಿದ್ದಾರೆ. ಪೊಲೀಸರ ಕ್ರಮವೇನು ಎಂಬುದನ್ನು ನಾವು ಅವರಿಗೆ ತೋರಿಸುತ್ತೇವೆ’ ಎಂದರು.

‘ಸ್ಥಳೀಯ ಶಾಸಕ, ಪಾಲಿಕೆ ಸದಸ್ಯ ಸ್ಥಳಕ್ಕೆ ಬರುವಂತೆ ಶಂಕಿತರು ಒತ್ತಾಯಿಸಿದ್ದರಂತೆ‘ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ‘ಶಾಸಕ ಜಮೀರ್ ಅಹ್ಮದ್ ಅವರು ಸರ್ಕಾರವಲ್ಲ.‌ ಯಾವಾಗ ? ಏನು ? ಹೇಗೆ ? ಮಾಡಬೇಕು ಎಂಬುದು ಅಧಿಕಾರಿಗಳಿಗೆ ಗೊತ್ತಿದೆ’ ಎಂದರು.

ಪ್ರತಿಕ್ರಿಯೆ

ಪೊಲೀಸರು ಲಾಠಿ ಬಿಟ್ಟು ಕೆಲಸ ಮಾಡುತ್ತಿಲ್ಲ. ಸರ್ಕಾರ ಕೊಟ್ಟಿರುವ ಅಸ್ತ್ರಗಳನ್ನು ಸಂದರ್ಭಕ್ಕೆ ಅನುಸಾರವಾಗಿ ಬಳಸಿಕೊಂಡು ನಮ್ಮ ಕೆಲಸ ಮಾಡುತ್ತೇವೆ ಎಂದು ಪೊಲೀಸ್ ಕಮಿಷನರ್ಭಾಸ್ಕರ್ ರಾವ್ ಹೇಳಿದರು.

ಪಾದರಾಯನಪುರ ಘಟನೆ ವ್ಯಕ್ತಿಗಳು ಮಾಡಿರುವ ತಪ್ಪು. ಹೀಗಾಗಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕೆ ಹೊರತು ಒಂದು ಸಮುದಾಯದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಪೊಲೀಸರು, ವೈದ್ಯಕೀಯ ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.