ADVERTISEMENT

ಬೆಂಗಳೂರು ಆರೋಗ್ಯ ಸೇವೆಗೆ ಪ್ರತ್ಯೇಕ ಪ್ರಾಧಿಕಾರ: ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 17:02 IST
Last Updated 12 ಸೆಪ್ಟೆಂಬರ್ 2021, 17:02 IST
ಆರೋಗ್ಯ ಕವಚ ಯೋಜನೆಯಡಿ 120 ಹೊಸ ಆಂಬುಲೆನ್ಸ್‌ ಸೇವೆಗೆ ಭಾನುವಾರ ಚಾಲನೆ ನೀಡಿದ ಬಳಿಕ ಆಂಬುಲೆನ್ಸ್‌ಗಳು ವಿಧಾನಸೌಧದ ಮುಂಭಾಗದಲ್ಲಿ ಸಾಗಿ ಬರುತ್ತಿರುವುದು– ಪ್ರಜಾವಾಣಿ ಚಿತ್ರ
ಆರೋಗ್ಯ ಕವಚ ಯೋಜನೆಯಡಿ 120 ಹೊಸ ಆಂಬುಲೆನ್ಸ್‌ ಸೇವೆಗೆ ಭಾನುವಾರ ಚಾಲನೆ ನೀಡಿದ ಬಳಿಕ ಆಂಬುಲೆನ್ಸ್‌ಗಳು ವಿಧಾನಸೌಧದ ಮುಂಭಾಗದಲ್ಲಿ ಸಾಗಿ ಬರುತ್ತಿರುವುದು– ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಎಲ್ಲ ಆರೋಗ್ಯ ಸೇವೆಗಳನ್ನು ಒಂದೇ ವ್ಯವಸ್ಥೆಯಡಿ ಒದಗಿಸುವ ಚಿಂತನೆ ನಡೆದಿದ್ದು, ಇದಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

‘108 ಆರೋಗ್ಯ ಕವಚ’ ಯೋಜನೆಯಡಿ ಆರೋಗ್ಯ ಇಲಾಖೆ ಖರೀದಿಸಿರುವ ಅತ್ಯಾಧುನಿಕ ಜೀವ ರಕ್ಷಣಾ ವ್ಯವಸ್ಥೆಯುಳ್ಳ 120 ಆಂಬುಲೆನ್ಸ್‌ಗಳ ಸೇವೆಗೆ ವಿಧಾನಸೌಧದ ಮುಂಭಾಗ ಭಾನುವಾರ ನಡೆದ ಸಮಾರಂಭದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರು ನಗರದಲ್ಲಿ ಜನಸಾಂದ್ರತೆ ಅಧಿಕವಾಗಿದೆ. ಇಲ್ಲಿ ಎಲ್ಲ ಆರೋಗ್ಯ ಸೇವೆಗಳೂ ಒಂದೇ ವ್ಯವಸ್ಥೆಯಡಿ ದೊರಕಿದರೆ ಜನರಿಗೆ ಅನುಕೂಲವಾಗುತ್ತದೆ ಎಂದರು.

ADVERTISEMENT

ಪ್ರತ್ಯೇಕ ಸಿಬ್ಬಂದಿ ಬೇಕಿದೆ: ಸಮುದಾಯ ಆರೋಗ್ಯ ಸೇವೆಯನ್ನು ಇನ್ನಷ್ಟು ಬಲಗೊಳಿಸುವುದು ಅನಿವಾರ್ಯ ಎಂಬುದು ಕೋವಿಡ್‌ ಬಿಕ್ಕಟ್ಟಿನಿಂದ ಅರಿವಿಗೆ ಬಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಮುದಾಯ ಆರೋಗ್ಯ ಸೇವೆಗೆ ಪ್ರತ್ಯೇಕ ವೃಂದವನ್ನೇ ರೂಪಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಸಮುದಾಯ ಆರೋಗ್ಯ ಸೇವೆಯ ಡಿಪ್ಲೊಮಾ ಕೋರ್ಸ್‌ ಆರಂಭಿಸಬೇಕು. ಈ ಶಿಕ್ಷಣ ಪಡೆದವರನ್ನೇ ಪ್ರತ್ಯೇಕ ವೃಂದದಲ್ಲಿ ನೇಮಕ ಮಾಡಬೇಕು ಎಂದರು.

ಆರೋಗ್ಯ ಇಲಾಖೆಯ ಆಂಬುಲೆನ್ಸ್‌ ಸೇವೆ ಹಿಂದಿನಿಂದಲೂ ಇತ್ತು. ಆದರೆ, ಈಗ ಅದರ ಸ್ವರೂಪ ಬದಲಾಗಿದೆ. ಹಿಂದೆ ಆಂಬುಲೆನ್ಸ್‌ಗಳನ್ನು ರೋಗಿಗಳ ಸಾಗಾಟಕ್ಕೆ ಮಾತ್ರ ಬಳಸಲಾಗುತ್ತಿತ್ತು. ಈಗ ಅದರಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದೆ. ಆಲಸ್ಯ, ಬೇಜವಾಬ್ದಾರಿತನ ಇಲ್ಲದೆ ಜನರಿಗೆ ಸೇವೆ ನೀಡುವುದನ್ನು ಆಂಬುಲೆನ್ಸ್‌ ಸಿಬ್ಬಂದಿ ಮೈಗೂಡಿಸಿಕೊಳ್ಳಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.

‘ಆರೋಗ್ಯ ಸೇವೆಗಳಲ್ಲಿ ಇರುವ ಪ್ರಾದೇಶಿಕ ಅಸಮಾನತೆ ತೊಡೆದುಹಾಕಲು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ 10,000 ಜನರಿಗೆ ಒಂದು ಹಾಸಿಗೆ ಮಾತ್ರ ಲಭ್ಯವಿದೆ. ರೋಗಿಗಳು ಮತ್ತು ವೈದ್ಯರ ಅನುಪಾತದಲ್ಲೂ ಅಸಮಾನತೆ ಇದೆ. ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಜಿಪಿಎಸ್‌ ಅಳವಡಿಕೆ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿ, ‘ಆರೋಗ್ಯ ಕವಚ ಯೋಜನೆಯಲ್ಲಿ 710 ಆಂಬುಲೆನ್ಸ್‌ಗಳು ಇದ್ದವು. ಈಗ 120 ಆಂಬುಲೆನ್ಸ್‌ಗಳ ಸೇರ್ಪಡೆಯಾಗಿದೆ. ಎಲ್ಲ ಆಂಬುಲೆನ್ಸ್‌ಗಳಿಗೂ ಜಿಪಿಎಸ್‌ ಅಳವಡಿಸಿ, ನಿಗಾ ಇರಿಸುವ ವ್ಯವಸ್ಥೆ ಮಾಡಲಾಗುವುದು’ ಎಂದರು.

ಈಗ ಪ್ರತಿ ಒಂದು ಲಕ್ಷ ಜನರಿಗೆ ಒಂದು ಆಂಬುಲೆನ್ಸ್‌ ಇದೆ. ಮುಂದಿನ ದಿನಗಳಲ್ಲಿ 40,000 ದಿಂದ 50,000 ಜನರಿಗೆ ಒಂದು ಆಂಬುಲೆನ್ಸ್‌ ಒದಗಿಸುವ ಗುರಿ ಇದೆ ಎಂದು ತಿಳಿಸಿದರು.

ಸಚಿವರಾದ ಬಿ. ಶ್ರೀರಾಮುಲು, ಎಸ್‌.ಟಿ. ಸೋಮಶೇಖರ್, ಬೈರತಿ ಬಸವರಾಜ, ಮುನಿರತ್ನ, ಸಂಸದ ಪಿ.ಸಿ. ಮೋಹನ್‌, ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌ ಮತ್ತು ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಇದ್ದರು.

ಸಚಿವ ಸುಧಾಕರ್‌ ಕಾಲೆಳೆದ ಸಿಎಂ

‘ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರು ಸ್ವತಃ ವೈದ್ಯರಾಗಿರುವುದರಿಂದ ಆರೋಗ್ಯ ಇಲಾಖೆ ಮಾತ್ರವಲ್ಲ ಇಡೀ ಆರೋಗ್ಯ ಕ್ಷೇತ್ರಕ್ಕೆ ಸಹಕಾರಿಯಾಗಿದೆ. ಆರೋಗ್ಯ ಸಚಿವರು ಬುದ್ಧಿವಂತರು. ಬಹಳ ಬುದ್ಧಿವಂತರೂ ನಮಗೆ ಸಮಸ್ಯೆಯಾಗುತ್ತಾರೆ. ಬಜೆಟ್‌ನಲ್ಲಿ ಅವರ ಇಲಾಖೆಗೆ ಹೆಚ್ಚು ಹಣ ಒದಗಿಸಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮಾಷೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.