ADVERTISEMENT

ಸೆಪ್ಟಿಕ್‌ ಟ್ಯಾಂಕ್ ಸ್ವಚ್ಛತೆಗೆ ಕಾರ್ಮಿಕರ ಬಳಕೆ

ತಲಘಟ್ಟಪುರ ಠಾಣೆಗೆ ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:43 IST
Last Updated 19 ಏಪ್ರಿಲ್ 2019, 19:43 IST

ಬೆಂಗಳೂರು: ರಾತ್ರೋರಾತ್ರಿ ಪೌರ ಕಾರ್ಮಿಕರನ್ನು ಸೆಪ್ಟಿಕ್ ಟ್ಯಾಂಕ್‌ಗೆ ಇಳಿಸಿದ್ದ ಆರೋಪದಡಿ ಜೆ.ಪಿ.ನಗರ 8ನೇ ಹಂತದಲ್ಲಿರುವ ‘ಆರ್ಯ ಹಂಸ’ ಅಪಾರ್ಟ್‌ಮೆಂಟ್ ಸಮುಚ್ಚಯದ ಆಡಳಿತ ಮಂಡಳಿ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಏ.16ರಂದು ತಲಘಟ್ಟಪುರ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಕೆಲ ದಿನಗಳ ಹಿಂದೆ ಅಪಾರ್ಟ್‌ಮೆಂಟ್ ಆಡಳಿತ ಮಂಡಳಿಯವರು 5–6 ಕಾರ್ಮಿಕರನ್ನು ಬಳಸಿಕೊಂಡು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ಮಾಡಿಸಿದ್ದಾರೆ. ರಾತ್ರಿ 11 ಗಂಟೆಯಿಂದ 5.30ರ ನಡುವೆ ಈ ಕೆಲಸ ನಡೆದಿದೆ’ ಎಂದು ಆರೋಪಿಸಿ ಡಾ.ವೀಣಾ ಕುಲಕರ್ಣಿ ಎಂಬುವರು ಸಮಾಜ ಕಲ್ಯಾಣ ಇಲಾಖೆಗೆ ದೂರು ಕೊಟ್ಟಿದ್ದರು.

‘ದೂರಿನ ಅನ್ವಯ ಏ.3ರಂದು ಸ್ಥಳ ಪರಿಶೀಲನೆ ನಡೆಸಲಾಗಿದ್ದು, ವೀಣಾ ಅವರ ಆರೋಪಕ್ಕೆ ಕೆಲವು ಪುರಾವೆಗಳು ಸಿಕ್ಕಿವೆ. ಹೀಗಾಗಿ, ಕಾನೂನು ಉಲ್ಲಂಘಿಸಿ ಕಾರ್ಮಿಕರನ್ನು ಟ್ಯಾಂಕ್‌ಗೆ ಇಳಿಸಿದ್ದ ಅಪಾರ್ಟ್‌ಮೆಂಟ್ ಸಮುಚ್ಚಯದ ಕಾರ್ಯದರ್ಶಿ ಅನಿಜಿತ್ ಶೆಟ್ಟಿ ಹಾಗೂ ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಶಿಧರ್ ಜೋಷಿ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ರವಿಕುಮಾರ್ ದೂರು ಕೊಟ್ಟಿದ್ದಾರೆ.

ADVERTISEMENT

ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ನೋಟಿಸ್ ನೀಡಿದ್ದೇವೆ’ ಎಂದು ತಲಘಟ್ಟಪುರ ಪೊಲೀಸರು ತಿಳಿಸಿದ್ದಾರೆ.

ಮಲ ಹೊರುವ ಪದ್ಧತಿ ನಿಷೇಧ ಹಾಗೂ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಕಾಯ್ದೆಯಡಿ (2013) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.