
ರೇಷ್ಮೆ ಕೃಷಿ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ರಾಜ್ಯದ ಗ್ರಾಮೀಣ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿರುವ ರೇಷ್ಮೆ ಕೃಷಿ, ಗ್ರಾಮೀಣ ಸಮುದಾಯಗಳನ್ನು ಗಣನೀಯವಾಗಿ ಸಬಲೀಕರಣಗೊಳಿಸಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಆರ್.ಗಿರೀಶ್ ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿ ಶನಿವಾರ ಆಯೋಜಿಸಿದ್ದ ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿರ್ದೇಶಕರ ಸಮ್ಮೇಳನದಲ್ಲಿ ಮಾತನಾಡಿದರು.
ಉತ್ತಮ ಗುಣಮಟ್ಟದ ಬೈವೋಲ್ಟೀನ್ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಹಲವು ರೇಷ್ಮೆ ಕೃಷಿಕರು ವಾರ್ಷಿಕ ಆದಾಯವನ್ನು ಗಳಿಸುತ್ತಿದ್ದಾರೆ. ಇದು ಜೀವನೋಪಾಯದ ಆಯ್ಕೆಯಾಗಿ ರೇಷ್ಮೆ ಕೃಷಿಯ ಆರ್ಥಿಕ ಕಾರ್ಯಸಾಧ್ಯತೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ ಎಂದು ತಿಳಿಸಿದರು.
ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ನೀಲಂ ಶಾಮಿ ರಾವ್ ಮಾತನಾಡಿ, ರೇಷ್ಮೆ ಮಾರುಕಟ್ಟೆ, ಸ್ಥಿತಿಗತಿ ಮತ್ತು ಬ್ರ್ಯಾಂಡಿಂಗ್‌ಗೆ ಹೆಚ್ಚಿನ ಗಮನ ನೀಡಬೇಕು. ಬೇಡಿಕೆ ಮತ್ತು ಪೂರೈಕೆಯನ್ನು ಸಮನ್ವಯಗೊಳಿಸುವುದು, ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಹಾಗೂ ಗ್ರಾಹಕರ ವಿಶ್ವಾಸ ಗಳಿಸುವ ಅಗತ್ಯವಿದೆ ಎಂದರು.
‘ಸಿಲ್ಕ್ ಮಾರ್ಕ್’ ಪ್ರಮಾಣೀಕರಣದ ಮಹತ್ವವನ್ನು ಉಲ್ಲೇಖಿಸಿದ ಅವರು, ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ದೇಶದ ರೇಷ್ಮೆಯ ವಿಶ್ವಾಸಾರ್ಹತೆ ಮತ್ತು ಮೌಲ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಿದೆ. ಜಮ್ಮು ಮತ್ತು ಕಾಶ್ಮೀರದ ಮನಸ್ಬಲ್‌ನಲ್ಲಿ ‘ರೇಷ್ಮೆ ಪ್ರವಾಸೋದ್ಯಮ’ ಆರಂಭ ಹಾಗೂ ರಾಷ್ಟ್ರೀಯ ಜವಳಿ–2025 ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.