ADVERTISEMENT

ದಟ್ಟಮಂಜಿನಿಂದ ನೆಲಮಂಗಲ ಬಳಿ ಸರಣಿ ಅಪಘಾತ

ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 20:16 IST
Last Updated 30 ಡಿಸೆಂಬರ್ 2021, 20:16 IST
ಅಪಘಾತದ ದೃಶ್ಯ
ಅಪಘಾತದ ದೃಶ್ಯ   

ಬೆಂಗಳೂರು: ದಟ್ಟ ಮಂಜು ಕವಿದಿದ್ದರಿಂದ ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಟಿ.ಬೇಗೂರು ಕ್ರಾಸ್‌ ಬಳಿಮುಂಜಾವಿನಲ್ಲಿ ಬಸ್‌, ಸರಕು ಸಾಗಣೆ ವಾಹನ ಹಾಗೂ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಒಂಬತ್ತು ವಾಹನಗಳು ಜಖಂಗೊಂಡಿವೆ.

‘ಮಂಜು ಕವಿದಿದ್ದರಿಂದ ಎದುರಿನ ವಾಹನ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ತುಮಕೂರಿನಿಂದ ನಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ದಿಢೀರ್‌ ಬ್ರೇಕ್ ಹಾಕಿದ್ದರು. ಹಿಂದಿನಿಂದ ವೇಗ ವಾಗಿ ಬಂದ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿತ್ತು. ಲಾರಿಯ ಹಿಂದೆ ಬರುತ್ತಿದ್ದ ಖಾಸಗಿ ಬಸ್‌, ಕಾರು, ತರಕಾರಿ ತುಂಬಿದ್ದ ಲಾರಿ ಸೇರಿದಂತೆ ಒಂಬತ್ತು ವಾಹನಗಳ ನಡುವೆ ಸರಣಿ ಡಿಕ್ಕಿ ಏರ್ಪಟ್ಟಿತ್ತು’ ಎಂದು ಸಂಚಾರ ಪೊಲೀಸ್‌ ಅಧಿಕಾರಿಯೊ ಬ್ಬರು ಹೇಳಿದರು.

‘ಡಿಕ್ಕಿಯ ರಭಸಕ್ಕೆ ಲಾರಿ ಹಾಗೂ ಇತರ ವಾಹನಗಳು ರಸ್ತೆ ವಿಭಜಕದ ಮೇಲೇರಿದ್ದವು. ಕೆಲ ವಾಹನಗಳು ರಸ್ತೆಗೆ ಅಡ್ಡಲಾಗಿ ನಿಂತಿದ್ದವು. ಹೀಗಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಚಾಲಕನ ಕಾಲಿನ ಮೂಳೆ ಮುರಿದಿದೆ. ಅದೇ ಬಸ್‌ನಲ್ಲಿದ್ದ ಬಿಹಾರ, ಕಾರವಾರ ಹಾಗೂ ಯಲ್ಲಾಪುರ ಮೂಲದ ಪ್ರಯಾಣಿ ಕರಿಗೆ ಗಾಯಗಳಾಗಿವೆ. ಎಲ್ಲರನ್ನೂ ನೆಲ ಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಕೆಲವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದರು. ‘ನುಜ್ಜುಗುಜ್ಜಾಗಿದ್ದ ವಾಹನಗಳನ್ನು ಕ್ರೇನ್‌ನಿಂದ ಬೇರ್ಪಡಿಸಲಾಗಿದೆ. ವಿವಿಧೆಡೆಯಿಂದ ನಗರಕ್ಕೆ ಬರುತ್ತಿದ್ದ ವಾಹನಗಳು ಕಿ.ಮೀ.ನಷ್ಟು ದೂರ ಸಾಲುಗಟ್ಟಿ ನಿಂತಿದ್ದವು. ದಟ್ಟಣೆ ನಿಯಂತ್ರಿಸಲು ಹೆದ್ದಾರಿಯ ಬಲಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು’ ಎಂದರು.

ADVERTISEMENT

ಪ್ರಯಾಣಿಕರ ಪರದಾಟ: ‘ವಾಹನ ದಟ್ಟಣೆ ನಿಯಂತ್ರಿಸಲು ನೆಲಮಂಗಲದ ಸಂಚಾರ ಪೊಲೀಸರು ಹರಸಾಹಸ ಪಟ್ಟರು. ಪ್ರಯಾಣಿಕರರಿಗೂ ಸಮಸ್ಯೆಯಾಯಿತು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಂಚಾರ ಸಹಜ ಸ್ಥಿತಿಗೆ ಮರಳಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.