ADVERTISEMENT

ಬೆಳ್ಳಂದೂರು– ವರ್ತೂರು ಕೆರೆ ನಡುವೆ ರಸ್ತೆ

ಆರ್. ಮಂಜುನಾಥ್
Published 8 ಸೆಪ್ಟೆಂಬರ್ 2025, 23:32 IST
Last Updated 8 ಸೆಪ್ಟೆಂಬರ್ 2025, 23:32 IST
   

ಬೆಂಗಳೂರು: ಬೆಳ್ಳಂದೂರು ಕೆರೆ – ವರ್ತೂರು ಕೆರೆ ನಡುವಿನ ರಾಜಕಾಲುವೆಗಳ ಬಫರ್‌ ವಲಯದಲ್ಲಿ ಸರ್ವಿಸ್‌ ರಸ್ತೆಯನ್ನು ಆರು ತಿಂಗಳಲ್ಲಿ ನಿರ್ಮಿಸಲು ‘ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಸಂಸ್ಥೆ’ (ಬಿ–ಸ್ಮೈಲ್‌) ಮುಂದಾಗಿದೆ.

ರಾಜಕಾಲುವೆಗಳ ಬಫರ್‌ ವಲಯದಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸುವ ಎರಡನೇ ಹಂತದ ಯೋಜನೆಗೆ ಬಿ–ಸ್ಮೈಲ್‌ ಚಾಲನೆ ನೀಡಿದ್ದು, 18.23 ಕಿ.ಮೀ ರಸ್ತೆಯನ್ನು ₹22.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಿದೆ.

ಬೆಳ್ಳಂದೂರು ಕೆರೆ ಕೋಡಿಯಿಂದ ಹಳೆ ವಿಮಾನ ನಿಲ್ದಾಣದ ವರ್ಜಿನಿಯಾ ಮಾಲ್‌ವರೆಗೆ ಸರ್ವಿಸ್‌ ರಸ್ತೆ ನಿರ್ಮಾಣ ಸೇರಿದಂತೆ ರಾಜಕಾಲುವೆ ರಕ್ಷಣೆ, ಅಭಿವೃದ್ಧಿಯ ಕಾಮಗಾರಿಯನ್ನೂ ನಡೆಸಲಾಗುತ್ತದೆ. ಇದಕ್ಕಾಗಿ ಬಿ–ಸ್ಮೈಲ್‌ ಟೆಂಡರ್‌ ಕರೆದಿದ್ದು, ಅಕ್ಟೋಬರ್‌ನಲ್ಲಿ ಪ್ರಕ್ರಿಯೆ ಮುಗಿಸಿ, ಆರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ADVERTISEMENT

ಸರ್ವಿಸ್‌ ರಸ್ತೆ: ಪ್ರೆಸ್ಟೀಜ್‌ ಬೀಟಾ ಟೆಕ್‌ ಪಾರ್ಕ್‌ನಿಂದ ಕರಿಯಮ್ಮನ ಅಗ್ರಹಾರ ರಸ್ತೆ, ಕರಿಯಮ್ಮನ ಅಗ್ರಹಾರ ರಸ್ತೆಯಿಂದ ಪ್ರೆಸ್ಟೀಜ್‌ ಪಾರ್ಕ್‌ ಎಲಾನ್ತ್‌ ಬ್ಲಾಕ್‌ (ಎರಡೂ ಕಡೆ), ಒಳಹರಿವು ಕಾಲುವೆ ಪಕ್ಕ, ಪ್ರೆಸ್ಟೀಜ್‌ ಪಾರ್ಕ್ ಎಲಾನ್ತ್‌ನಿಂದ 100 ಅಡಿ ವರ್ತುಲ ರಸ್ತೆ (ಎರಡೂ ಕಡೆ), 100 ಅಡಿ ವರ್ತುಲ ರಸ್ತೆಯಿಂದ ರೈಲ್ವೆ ಬ್ರಿಡ್ಜ್‌ (ಎರಡೂ ಕಡೆ) ಹಾಗೂ ರೈಲ್ವೆ ಬ್ರಿಡ್ಜ್‌ನಿಂದ ವಿಬ್‌ಗಯಾರ್‌ ಪ್ರೌಢ ಶಾಲೆ ರಸ್ತೆವರೆಗೆ (ಎರಡೂ ಬದಿ) ರಾಜಕಾಲುವೆ ಬಫರ್‌ ವಲಯದಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಲಿದೆ.

ರಾಜಕಾಲುವೆ ಬಫರ್‌ ವಲಯದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವಾಗ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಕಾಮಗಾರಿ ನಡೆಸಬೇಕು. ಮಾಲಿನ್ಯ, ಶಬ್ದ ಸೇರಿದಂತೆ ಇತರೆ ಸಮಸ್ಯೆಗಳೂ ಉಂಟಾಗಬಾರದು. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಇತರೆ ಪ‍್ರಾಧಿಕಾರಗಳ ಎಲ್ಲ ನಿಯಮಗಳನ್ನೂ ಪಾಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಮೊದಲ ಹಂತ: ಮೈಸೂರು ರಸ್ತೆ, ಹೊರವರ್ತುಲ ರಸ್ತೆ ಹಾಗೂ ಬಳ್ಳಾರಿ ರಸ್ತೆ, ನಾಗವಾರ ರಸ್ತೆಗಳ ಸುತ್ತಮುತ್ತಲಿನ ರಾಜಕಾಲುವೆಗಳ ಬಫರ್‌ ವಲಯದಲ್ಲಿ ಮೊದಲ ಹಂತದಲ್ಲಿ ಸುಮಾರು 42 ಕಿ.ಮೀ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಬಿ–ಸ್ಮೈಲ್‌ ಸದ್ಯದಲ್ಲಿಯೇ ಕಾರ್ಯಾದೇಶ ನೀಡಲಿದೆ. 

ಮೊದಲ ಹಂತದಲ್ಲಿ ₹75 ಕೋಟಿ ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್‌ಗಳಲ್ಲಿ 42 ಕಿ.ಮೀ ಸರ್ವಿಸ್‌ ರಸ್ತೆಯನ್ನು ಆರು ತಿಂಗಳಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ರಾಜಕಾಲುವೆಯ ಅಳತೆಗೆ ಅನುಗುಣವಾಗಿ ಸರ್ವಿಸ್‌ ರಸ್ತೆಯ ಅಗಲ ನಿರ್ಧಾರವಾಗಲಿದೆ. ಕನಿಷ್ಠ 30 ಅಡಿಯಿಂದ ಗರಿಷ್ಠ 80 ಅಡಿ ಅಗಲದವರೆಗೆ ಸರ್ವಿಸ್‌ ರಸ್ತೆಗೆ ಜಾಗ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.