ಬೆಂಗಳೂರು: ‘ಬೆಂಗಳೂರು ನಗರ ದಕ್ಷಿಣ ತಾಲ್ಲೂಕಿನ ಹುಳಿಮಾವು ಗ್ರಾಮದಲ್ಲಿ ಇಸ್ಲಾಮಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆಯು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಹೈಕೋರ್ಟ್‌ನ ಆದೇಶದಂತೆ ಅದನ್ನು ಸರ್ಕಾರ ವಶಕ್ಕೆ ಪಡೆಯಬೇಕು’ ಎಂದು ಬಿಜೆಪಿ ಸದಸ್ಯ ಎನ್. ರವಿಕುಮಾರ್ ಒತ್ತಾಯಿಸಿದರು.
ವಿಧಾನ ಪರಿಷತ್‌ನಲ್ಲಿ ನಿಯಮ 330ರಡಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಐದು ಎಕರೆ ಸರ್ಕಾರಿ ಜಾಗದಲ್ಲಿ ಸಂಸ್ಥೆಯ ನಾಮಫಲಕ ಹಾಕಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಅನುಮತಿ ನೀಡಿದ್ದಾರೆ. ಸುಳ್ಳು ದಾಖಲೆ-ತಪ್ಪು ಮಾಹಿತಿಗಳನ್ನು ಪಡೆದು ಎಂಜಿನಿಯರಿಂಗ್ ಕಾಲೇಜಿಗೆ ಅನುಮತಿ ಕೊಟ್ಟವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.
‘ಇದು ಸರ್ಕಾರ ಜಾಗ ಎಂದು 2016ರಲ್ಲಿ ಕಂದಾಯ ಇಲಾಖೆ ಹೇಳಿದೆ. ಹೀಗಿದ್ದೂ ಶಿಕ್ಷಣ ಇಲಾಖೆ ಹೇಗೆ ಅನುಮತಿ ಕೊಟ್ಟಿತು. ಮುಖ್ಯವಾಗಿ 5 ಎಕರೆ ಜಾಗ ಸರ್ಕಾರಕ್ಕೆ ಸೇರಿದ್ದು, ಅದನ್ನು ವಶಪಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ’ ಎಂದೂ ಮಾಹಿತಿ ನೀಡಿದರು.
‘ಈ ಕಾಲೇಜು 1979–80ರಲ್ಲಿಯೇ ಆರಂಭವಾಗಿದೆ. ಜಾಗಕ್ಕೆ ಪ್ರಾಥಮಿಕ ಅಧಿಸೂಚನೆ ಆದಾಗ ಸಂಸ್ಥೆ ₹5.85 ಲಕ್ಷವನ್ನೂ ಸಂಸ್ಥೆ ಪಾವತಿಸಿದೆ. ಜಾಗವನ್ನು ತಮಗೆ ಮಂಜೂರು ಮಾಡುವಂತೆ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿದ ಮನವಿಯು ಸರ್ಕಾರದಿಂದ ಮುಂದಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಂಸ್ಥೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ’ ಎಂದು ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಹೇಳಿದರು.
‘ಬೇರೆ ಧರ್ಮಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳವರಿಗೆ ಒಂದೆರಡು ವರ್ಷಗಳಲ್ಲಿಯೇ ಸರ್ಕಾರದಿಂದ ಅನುಮತಿ ಸಿಗುತ್ತದೆ. ಮೂರು ದಶಕಗಳೇ ಕಳೆದರೂ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಗೆ ಅನುಮತಿ ಸಿಗುತ್ತಿಲ್ಲ. ಇದು ತಾರತಮ್ಯವಲ್ಲದೆ ಮತ್ತೇನು’ ಎಂದೂ ಅವರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್. ಅಶೋಕ್, ‘ಇದೇ 8ರಂದು ಸುಪ್ರೀಂಕೋರ್ಟ್ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ. ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಬೇಕಿದೆ. ಜೊತೆಗೆ ಜಾಗ ನಮಗೆ ಮಂಜೂರು ಮಾಡಿ ಎಂದು ಸಂಸ್ಥೆ ಸಲ್ಲಿಸಿರುವ ಮನವಿ ಸರ್ಕಾರದ ಮುಂದೆ ಬಾಕಿ ಇದೆ. ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಏನಾಗುತ್ತದೆ ಎಂದು ನೋಡಿ, ಮುಂದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಇದಕ್ಕೂ ಮುನ್ನ, ರವಿಕುಮಾರ್ ಅವರ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್, ‘ಈ ವಿಷಯ ಸುಪ್ರೀಂಕೋರ್ಟ್‍ನಲ್ಲಿದೆ. ಹಾಗಾಗಿ, ಸದನದಲ್ಲಿ ಪ್ರಸ್ತಾಪಿಸಿ, ಸರ್ಕಾರದಿಂದ ಉತ್ತರ ಪಡೆಯಲು ಅವಕಾಶವಿಲ್ಲ’ ಎಂದರು.
‘ನಿಯಮದಲ್ಲಿ ಇದಕ್ಕೆ ಅವಕಾಶವಿದೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.