
ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಕೆ.ಆರ್.ಪುರದ ಏಳು ವರ್ಷದ ಗಂಡು ಮಗುವಿನ ಅಂಗಾಂಗವನ್ನು ಪಾಲಕರು ದಾನ ಮಾಡಿದ್ದಾರೆ.
ಗಾಯಗೊಂಡಿದ್ದ ಮಗುವನ್ನು ಮಹದೇವಪುರದ ಕಿಮ್ಸ್ ಆಸ್ಪತ್ರೆಗೆ (ಕೃಷ್ಣ ವೈದ್ಯಕೀಯ ವಿಜ್ಞಾನ ಸಂಸ್ಥೆ) ದಾಖಲಿಸಲಾಗಿತ್ತು. ಏಳು ದಿನಗಳು ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತು. ಮಿದುಳಿಗೆ ಗಂಭೀರ ಗಾಯವಾಗಿದ್ದರಿಂದ, ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿರಲಿಲ್ಲ. ಅಂತಿಮವಾಗಿ ಆಸ್ಪತ್ರೆಯ ಡಾ. ಗುರುದತ್ ಹಾಗೂ ಡಾ. ರಘುರಾಮ್ ಗೋಪಾಲಕೃಷ್ಣನ್ ಅವರನ್ನು ಒಳಗೊಂಡ ತಂಡ ಮಗುವಿನ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿತು.
‘ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ ಮಾರ್ಗಸೂಚಿ ಪ್ರಕಾರ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿ, ಮಗುವಿನ ಅಂಗಾಂಗವನ್ನು ದಾನವಾಗಿ ಪಡೆಯಲು ಪಾಲಕರ ಒಪ್ಪಿಗೆ ಪಡೆಯಲಾಯಿತು. ಕಣ್ಣುಗಳು, ಎರಡು ಮೂತ್ರಪಿಂಡಗಳು, ಯಕೃತ್ತು ಮತ್ತು ಹೃದಯದ ಕವಾಟಗಳನ್ನು ದಾನವಾಗಿ ಪಡೆದು, ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಾಲ್ವರಿಗೆ ಆರೋಗ್ಯ ಇಲಾಖೆಯ ಜೀವಸಾರ್ಥಕತೆ ಸಂಸ್ಥೆಯ ಮೂಲಕ ಒದಗಿಸಲಾಗಿದೆ’ ಎಂದು ಡಾ. ಗುರುದತ್ ಎ.ವಿ. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.