ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪದ ಅಡಿ ಕಿರುತೆರೆಯ ನಟ ಚರಿತ್ ಬಾಳಪ್ಪ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಗಿದೆ.
‘ಅಮೃತಹಳ್ಳಿ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದರು. ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣವನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ತನಿಖೆ ಆರಂಭವಾಗಿದೆ. ಪ್ರಕರಣ ದಾಖಲಾದ ಬಳಿಕ ಚರಿತ್ ಬಾಳಪ್ಪ ಅವರು ನಾಪತ್ತೆ ಆಗಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸಿನಿಮಾವೊಂದರ ಚಿತ್ರೀಕರಣದ ವೀಕ್ಷಣೆಗೆ ತೆರಳಿದ್ದ ವೇಳೆ, ಚರಿತ್ ಅವರ ಪರಿಚಯ ಆಗಿತ್ತು. ಮದುವೆ ಆಗುವುದಾಗಿ ಹೇಳಿ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡಿದ್ದರು. ನಂತರ, ಬೇರೆ ಯುವತಿಯನ್ನು ಮದುವೆ ಆಗಿದ್ದಾರೆ. ನಮ್ಮಿಬ್ಬರ ಖಾಸಗಿ ಕ್ಷಣದ ಫೋಟೊಗಳನ್ನು ಇಟ್ಟುಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುವುದಾಗಿ ಈಗ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಯುವತಿ ದೂರಿದ್ದಾರೆ.
‘ಮನೆ ಹಾಗೂ ಕೆಲಸದ ಸ್ಥಳಕ್ಕೆ ಬಂದು ಕಿರುಕುಳ ನೀಡಿದ್ದಾರೆ. ಅಲ್ಲದೇ ಬೆಳ್ಳಿ ಸಾಮಗ್ರಿ ಹಾಗೂ ರೇಷ್ಮೆ ಸೀರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಸಂತ್ರಸ್ತೆ ಆಪಾದಿಸಿದ್ದಾರೆ.
ಮಂಗಳೂರು ಮೂಲದ ಚರಿತ್ ನಗರದಲ್ಲಿ ನೆಲಸಿದ್ದರು. ಕನ್ನಡದ ‘ಮುದ್ದುಲಕ್ಷ್ಮಿ’ ಮತ್ತು ತೆಲುಗಿನ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಚರಿತ್ ಬಾಳಪ್ಪ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪದ ಅಡಿ ಡಿಸೆಂಬರ್‌ನಲ್ಲಿ ರಾಜರಾಜೇಶ್ವರಿ ನಗರ ಠಾಣೆಯಲ್ಲೂ ಎಫ್‌ಐಆರ್ ದಾಖಲಾಗಿತ್ತು. ಕಿರುಕುಳಕ್ಕೆ ಒಳಗಾದ ಕಿರುತೆರೆ ನಟಿ ನೀಡಿದ್ದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದರು.
ಕೆಲವು ವರ್ಷಗಳ ಹಿಂದೆ ಚರಿತ್ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡುವಂತೆ ಪತ್ನಿ ನೋಟಿಸ್ ಕಳುಹಿಸಿದ್ದರು. ಆಗ ಮಾಜಿ ಪತ್ನಿಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಸರ್ಜಾಪುರ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿತ್ತು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.