ADVERTISEMENT

ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಲೈಂಗಿಕ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 18:53 IST
Last Updated 22 ಜನವರಿ 2021, 18:53 IST

ಬೆಂಗಳೂರು: ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಐವರು ಯುವಕರನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

‘ಕೆ.ಜಿ. ನಗರ ನಿವಾಸಿಗಳಾದ ವೆಂಕಟೇಶ್, ಲೇಖನ್, ಚೇತನ್, ರಕ್ಷಕ್, ಅಭಿಷೇಕ್ ಬಂಧಿತರು. ಕೃತ್ಯದ ಬಗ್ಗೆ ಬಾಲಕಿ ಪೋಷಕರು ನೀಡಿರುವ ದೂರು ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ವೆಂಕಟೇಶ್, ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದ. ಅದರ ಮೂಲಕ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ. ನಂತರ ಬಾಲಕಿ ಮೊಬೈಲ್ ನಂಬರ್ ಪಡೆದು ಕರೆಯನ್ನೂ ಮಾಡಲಾರಂಭಿಸಿದ್ದ. ಮಾತನಾಡಬೇಕೆಂದು ಹೇಳಿ ಬಾಲಕಿಯನ್ನು ನ. 8ರಂದು ತನ್ನ ಬಳಿ ಕರೆಸಿಕೊಂಡಿದ್ದ ಆರೋಪಿ, ಸ್ನೇಹಿತರ ಜೊತೆ ಕಾರಿನಲ್ಲಿ ಉದ್ಯಾನವೊಂದಕ್ಕೆ ಕರೆದೊಯ್ದಿದ್ದ. ಅಲ್ಲಿ ಆರೋಪಿಗಳು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ವಿಷಯ ಯಾರಿಗೂ ತಿಳಿಸದಂತೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದರು.’

ADVERTISEMENT

‘ಬ್ಲ್ಯಾಕ್‌ಮೇಲ್ ಮಾಡಿ ಜ. 18ರಂದು ತಡರಾತ್ರಿ ಸಹ ಬಾಲಕಿಯನ್ನು ಕೊಠಡಿಯೊಂದಕ್ಕೆ ಕರೆಸಿಕೊಂಡಿದ್ದ ಆರೋಪಿಗಳು, ಲೈಂಗಿಕ ದೌರ್ಜನ್ಯ ಎಸಗಿದ್ದರು. ಮನೆಯಲ್ಲಿ ಮೊಮ್ಮಗಳು ಇಲ್ಲದಿದ್ದರಿಂದ ಗಾಬರಿಗೊಂಡಿದ್ದ ಅಜ್ಜ, ತಡರಾತ್ರಿ ಮನೆ ಸುತ್ತಮುತ್ತ ಹಾಗೂ ರಸ್ತೆಗಳಲ್ಲಿ ಹುಡುಕಾಡಿದ್ದರು. ಅದೇ ವೇಳೆಯೇ ಸ್ಥಳದಲ್ಲಿದ್ದ ಗಸ್ತಿನಲ್ಲಿದ್ದ ಹೊಯ್ಸಳ ವಾಹನದ ಸಿಬ್ಬಂದಿ, ಅಜ್ಜನನ್ನು ವಿಚಾರಿಸಿದ್ದರು. ಬಾಲಕಿ ಕಾಣೆಯಾದ ಬಗ್ಗೆ ಅವರು ಹೇಳಿದ್ದರು’ ಎಂದು ಮೂಲಗಳು ತಿಳಿಸಿವೆ.

‘ತುರ್ತು ಕಾರ್ಯಾಚರಣೆ ನಡೆಸಿದ ಪೊಲೀಸರು, ಮೊಬೈಲ್ ಕರೆ ಆಧರಿಸಿ ಬಾಲಕಿಯನ್ನು ಪತ್ತೆ ಮಾಡಿದ್ದರು. ಆರೋಪಿಗಳನ್ನೂ ಬಂಧಿಸಿದರು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಆನ್‌ಲೈನ್‌ ತರಗತಿಗೆ ಮೊಬೈಲ್‌; ‘ಆನ್‌ಲೈನ್ ತರಗತಿ ಕೇಳಲು ಅನುಕೂಲವಾಗಲೆಂದು ಪೋಷಕರು ಬಾಲಕಿಗೆ ಮೊಬೈಲ್ ಕೊಡಿಸಿದ್ದರು. ಅದೇ ಮೊಬೈಲ್‌ನಲ್ಲಿ ಬಾಲಕಿ ಇನ್‌ಸ್ಟಾಗ್ರಾಂ ಆ್ಯಪ್ ಬಳಸುತ್ತಿದ್ದಳು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.