ADVERTISEMENT

ವಿಮಾನದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ಮೂರು ವರ್ಷ ಕಠಿಣ ಶಿಕ್ಷೆ

ವಿಮಾನದಲ್ಲಿ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 20:02 IST
Last Updated 5 ಸೆಪ್ಟೆಂಬರ್ 2024, 20:02 IST
<div class="paragraphs"><p>ವಿಮಾನದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ</p></div>

ವಿಮಾನದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ

   

ಬೆಂಗಳೂರು: ವಿಮಾನದಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೋಕ್ಸೊ ಕಾಯ್ದೆಯ ಪ್ರಕರಣಗಳ ಒಂದನೇ ತ್ವರಿತ ವಿಶೇಷ ನ್ಯಾಯಾಲಯ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.

2023ರ ಜೂನ್ 27ರಂದು ತಂದೆ, ತಾಯಿ ಜತೆ ಸಂತ್ರಸ್ತ ಬಾಲಕಿ ವಾಷಿಂಗ್ಟನ್‌ನಿಂದ ದೋಹಾ ಮೂಲಕ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಳು. ಬಾಲಕಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದ ತಮಿಳುನಾಡಿನ ಕಂಡಂಗಿಪಟ್ಟಿ ನಿವಾಸಿ ಅಮವಾಶೈ ಮುರುಗೇಸನ್‌  ಎಂಬಾತ ಮದ್ಯದ ಅಮಲಿನಲ್ಲಿ ಆಕೆಯ ಎದೆ, ಮೈ, ಕೈಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಅಂದಿನ ತನಿಖಾಧಿಕಾರಿ, ಇನ್‌ಸ್ಪೆಕ್ಟರ್‌ ಎನ್‌.ಆನಂದ್ ಅವರು ಒಂಬತ್ತು ಜನ ಸಾಕ್ಷಿದಾರರ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಬಾಲಕಿ ಹಾಗೂ ಆಕೆಯ ತಂದೆ, ತಾಯಿಯ ಹೇಳಿಕೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ದಾಖಲಿಸಿಕೊಂಡಿತ್ತು.

ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎನ್‌.ಸರಸ್ವತಿ ಅವರು, ‘ಅಮವಾಶೈ ಮುರುಗೇಸನ್‌ ಅಪರಾಧಿ’ ಎಂದು ಸಾರಿದರು. ಅಪರಾಧಿಗೆ ಪೋಕ್ಸೊ ಕಾಯ್ದೆ ಅಡಿ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 10 ಸಾವಿರ ದಂಡವನ್ನು  ವಿಧಿಸಿ ಆದೇಶ ಹೊರಡಿಸಿದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎ.ಚಂದ್ರಕಲಾ ಅವರು ಪ್ರಾಸಿಕ್ಯೂಷನ್‌ ಪರವಾಗಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.