ADVERTISEMENT

ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ನಂಬಿಸಿ ಟೆಕಿಗೆ ₹48 ಲಕ್ಷ ವಂಚನೆ!

ವಿಜಯ್‌ ಗುರೂಜಿ ಸೇರಿ ಇಬ್ಬರ ವಿರುದ್ಧ ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 22:30 IST
Last Updated 23 ನವೆಂಬರ್ 2025, 22:30 IST
   

ಬೆಂಗಳೂರು: ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವುದಾಗಿ ನಂಬಿಸಿ ಸಾಫ್ಟ್‌ವೇರ್ ಎಂಜಿನಿಯರ್‌ ಒಬ್ಬರಿಗೆ ₹48 ಲಕ್ಷ ವಂಚಿಸಿರುವ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಟೆಕಿ ತೇಜಸ್ ಅವರ ದೂರಿನ ಮೇರೆಗೆ ವಿಜಯ್ ಗುರೂಜಿ ಹಾಗೂ ವಿಜಯಲಕ್ಷ್ಮಿ ಆಯುರ್ವೇದಿಕ್‌ ಶಾಪ್‌ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ‌ತೇಜಸ್, ಕೆಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದ ಟೆಂಟ್ ಬಳಿ ಹಾಕಲಾಗಿದ್ದ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಎಂಬ ಫಲಕ ನೋಡಿ, ಮೇ ತಿಂಗಳಲ್ಲಿ ಅಲ್ಲಿಗೆ ಭೇಟಿ ಕೊಟ್ಟಿದ್ದರು. ಟೆಂಟ್‍ನಲ್ಲಿದ್ದ ವ್ಯಕ್ತಿಯು ವಿಜಯ್ ಗುರೂಜಿ ಎಂಬಾತನನ್ನು ಪರಿಚಯ ಮಾಡಿಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ADVERTISEMENT

ಬಳಿಕ ತೇಜಸ್‍ನನ್ನು ಪರೀಕ್ಷಿಸಿದ್ದ ವಿಜಯ್ ಗುರೂಜಿ, ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದ ಔಷಧ ಅಂಗಡಿಯಲ್ಲಿ ದೇವರಾಜ್ ಬೂಟಿ ಹೆಸರಿನ ಔಷಧ ಖರೀದಿಸಿ ಸೇವಿಸಬೇಕು. ಅದರ ಬೆಲೆ ಗ್ರಾಂಗೆ ₹1.60 ಲಕ್ಷ ಇದ್ದು, ಆ ಔಷಧ ಬೇರೆ ಕಡೆ ಸಿಗುವುದಿಲ್ಲ. ಅದನ್ನು ಹರಿದ್ವಾರದಿಂದ ತರಿಸಲಾಗಿದೆ. ನಗದು ಪಾವತಿಸಿ ಆ ಔಷಧ ಖರೀದಿಸಬೇಕು ಮತ್ತು ಅದರ ಖರೀದಿಗೆ ಯಾರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಬಾರದು. ಬೇರೆ ವ್ಯಕ್ತಿಯನ್ನು ಜತೆಯಲ್ಲಿ ಕರೆದೊಯ್ದರೆ ಆ ಔಷಧಿಗೆ ಶಕ್ತಿ ಫಲಿಸುವುದಿಲ್ಲ ಎಂಬುದಾಗಿ ಷರತ್ತು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯ್ ಗುರೂಜಿ ಸಲಹೆಯಂತೆ ತೇಜಸ್ ಹಲವು ಬಾರಿ ದೇವರಾಜ್ ಬೂಟಿ ಮತ್ತು ಭವನ ಬೂಟಿ ತೈಲ ಖರೀದಿಸಿದ್ದರು. ಬೇರೆ ಬೇರೆ ಔಷಧಗಳು ಹಾಗೂ ತೈಲಗಳ ಹೆಸರಿನಲ್ಲಿ ತೇಜಸ್‍ರಿಂದ ಹಂತ ಹಂತವಾಗಿ ₹48 ಲಕ್ಷ ವಸೂಲು ಮಾಡಲಾಗಿದೆ. ಬ್ಯಾಂಕ್ ಹಾಗೂ ಸ್ನೇಹಿತರಿಂದ ಸಾಲ ಪಡೆದು ಔಷಧಗಳನ್ನು ಖರೀದಿಸಿದ್ದರು. ಆದರೂ ಸಮಸ್ಯೆ ಪರಿಹಾರವಾಗದಿದ್ದಾಗ ವಿಜಯ್ ಗುರೂಜಿ, ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಚಿಕಿತ್ಸೆ ಮುಂದುವರಿಸದಿದ್ದರೆ ಹೆಚ್ಚಿನ ಸಮಸ್ಯೆಯಾಗಿ ಜೀವಕ್ಕೆ ತೊಂದರೆಯಾಗುತ್ತದೆ ಎಂಬುದಾಗಿ ಹೆದರಿಸಿ ತೇಜಸ್‍ರಿಂದ ಮತ್ತೆ ಹಣ ಪೀಕಲು ಯತ್ನಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.