ADVERTISEMENT

‘ಅಂಧರ ಸಮಸ್ಯೆಗಳಿಗೆ ಸಮಾಜ ಸ್ಪಂದಿಸಬೇಕು’-ಎಸ್‌.ಜಿ.ಸಿದ್ದರಾಮಯ್ಯ

ಸಮಾವೇಶದಲ್ಲಿ ಸಾಹಿತಿ ಪ್ರೊ. ಎಸ್‌. ಜಿ. ಸಿದ್ದರಾಮಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 21:08 IST
Last Updated 20 ಫೆಬ್ರುವರಿ 2022, 21:08 IST
ನಗರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಅಂಧರ ಸಮಾವೇಶದಲ್ಲಿ ಖ್ಯಾತ ಗಾಯಕಿ ಬಿ.ಕೆ.ಸುಮಿತ್ರ ಅವರಿಗೆ ಸಂಗೀತರತ್ನ ಹಾಗೂ ಹೋರಾಟಗಾರ ಲಕ್ಷ್ಮೀನಾರಾಯಣ ನಾಗವಾರ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ, ಗಿರಿಜಾ ರೈಕ್ವಾ, ಚಿತ್ರ ನಿರ್ದೇಶಕ ಸಿಂಪಲ್ ಸುನಿಲ್, ಕರ್ನಾಟಕ ಅಂಧರ ವಿಮೋಚನಾ ವೇದಿಕೆ ಸಂಚಾಲಕ ಮುದುಗೆರೆ ರಮೇಶ್ ಕುಮಾರ್, ಎಚ್. ಜನಾರ್ಧನ್ (ಜನ್ನಿ), ಆಶ್ರಯ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ರಾಜ್ಯ ಘಟಕದ ಅಧ್ಯಕ್ಷ ಕದಂಬ ಶ್ರೀನಿವಾಸ್ ಇದ್ದರು. –ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಅಂಧರ ಸಮಾವೇಶದಲ್ಲಿ ಖ್ಯಾತ ಗಾಯಕಿ ಬಿ.ಕೆ.ಸುಮಿತ್ರ ಅವರಿಗೆ ಸಂಗೀತರತ್ನ ಹಾಗೂ ಹೋರಾಟಗಾರ ಲಕ್ಷ್ಮೀನಾರಾಯಣ ನಾಗವಾರ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ, ಗಿರಿಜಾ ರೈಕ್ವಾ, ಚಿತ್ರ ನಿರ್ದೇಶಕ ಸಿಂಪಲ್ ಸುನಿಲ್, ಕರ್ನಾಟಕ ಅಂಧರ ವಿಮೋಚನಾ ವೇದಿಕೆ ಸಂಚಾಲಕ ಮುದುಗೆರೆ ರಮೇಶ್ ಕುಮಾರ್, ಎಚ್. ಜನಾರ್ಧನ್ (ಜನ್ನಿ), ಆಶ್ರಯ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ರಾಜ್ಯ ಘಟಕದ ಅಧ್ಯಕ್ಷ ಕದಂಬ ಶ್ರೀನಿವಾಸ್ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಂಧ ಸಮುದಾಯದ ಸಮಸ್ಯೆಗಳಿಗೆ ಸಮಾಜ ಮುಕ್ತ ಮನಸ್ಸಿನಿಂದ ಸ್ಪಂದಿಸುವ ಮೂಲಕ ಪರಿಹಾರ ಒದಗಿಸಬೇಕು’ ಎಂದು ಸಾಹಿತಿ ಪ್ರೊ. ಎಸ್‌.ಜಿ ಸಿದ್ದರಾಮಯ್ಯ ಸಲಹೆ ನೀಡಿದರು.

ಆಶ್ರಯ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಮತ್ತು ಕರ್ನಾಟಕ ಅಂಧರ ವಿಮೋಚನಾ ವೇದಿಕೆ ಭಾನುವಾರ ಆಯೋಜಿಸಿದ್ದ ಅಂಧರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇಂದು ಸಮಾಜ ವಿವಿಧ ಕಾರಣಗಳಿಗೆ ವಿಘಟನೆಗೊಳ್ಳುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಆದರೆ, ಅಂಧ ಸಮುದಾಯ ಶುದ್ಧ ಮನಸ್ಸಿನಿಂದ ಸದಾ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಿದೆ’ ಎಂದು ಹೇಳಿದರು.

ADVERTISEMENT

‘ಕಣ್ಣಿಲ್ಲದಿದ್ದರೂ ಅಂತರ್‌ದೃಷ್ಟಿ ಇರಬೇಕು. ಆಗ ಅನ್ಯರ ನೋವು ಅರ್ಥವಾಗುತ್ತದೆ. ಕಣ್ಣಿದ್ದವರ ಸಮುದಾಯ ಅಂದರೆ ಜಾತಿ, ಧರ್ಮ ಎನ್ನುವ ಭಾವನೆ ಇದೆ. ಆದರೆ, ಅಂಧರು ಮನುಷ್ಯತ್ವದಿಂದ ತಮ್ಮ ಸಮುದಾಯದ ಭಾವನೆಯನ್ನು ಎತ್ತಿ ಹಿಡಿದಿದ್ದಾರೆ’ ಎಂದು ಹೇಳಿದರು.

ಅಂಧರ ವಿಮೋಚನಾ ವೇದಿಕೆಯ ರಾಜ್ಯ ಸಂಚಾಲಕ ಮುದಿಗೆರೆ ರಮೇಶ್‌ ಕುಮಾರ್‌, ‘ಅಂಧರಿಗೆ ಆರ್ಥಿಕ ಭದ್ರತೆಯ ಜತೆ ಸಾಮಾಜಿಕ ಘನತೆ ನೀಡಬೇಕು. ಸ್ವಾವಲಂಬಿಗಳಾಗಿ ಬದುಕುತ್ತಿರುವ ಅಂಧರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಗಳು ನಿರಂತರವಾಗಿ ನಡೆಯಬೇಕು’ ಎಂದು ಹೇಳಿದರು.

‘ಸರ್ಕಾರದ ವಿವಿಧ ಇಲಾಖೆಗಳಿಗೆ ಅಂಧರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆದರೆ, ಅವರ ಸಾಮರ್ಥ್ಯವನ್ನು ಸಹ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು. ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಗಳು ಹಾಗೂ ವಿವಿಧ ಅಕಾಡೆಮಿಗಳಲ್ಲಿಯೂ ಅಂಧರಿಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಹೇಳಿದರು.

ಗಾನಯೋಗಿ ಡಾ. ಪುಟ್ಟರಾಜ ಗವಾಯಿ ಸಂಗೀತ ರತ್ನ ಪ್ರಶಸ್ತಿಯನ್ನು ಖ್ಯಾತ ಗಾಯಕಿ ಬಿ.ಕೆ. ಸುಮಿತ್ರಾ ಅವರಿಗೆ ಹಾಗೂ ವಿಶ್ವಚೇತನ ಡಾ.ಹೆಲನ್‌ ಕೆಲ್ಲರ್‌ ಸೇವಾರತ್ನ ಪ್ರಶಸ್ತಿಯನ್ನು ಹೋರಾಟಗಾರ ಲಕ್ಷ್ಮೀನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು.

ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹತ್ತು ಅಂಧ ಮತ್ತು ಇತರೆ ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು.

‘ಮತಾಂಧರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿ’

‘ಮತಾಂಧರಿಂದ ಹೆಣ್ಣು ಮಕ್ಕಳು ಕಲಿಕೆಯಿಂದ ದೂರ ಉಳಿಯುವ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ’ ಎಂದು ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

‘ಧರ್ಮಾಂಧರಿಂದಾಗಿ ಹೆಣ್ಣುಮಕ್ಕಳ ಶಿಕ್ಷಣ ಹಾಳಾಗುತ್ತಿದೆ. ಮಕ್ಕಳನ್ನು ಶಾಲೆಯಿಂದ ಹೊರಗೆ ನಿಲ್ಲಿಸಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಈ ದೇಶವು ಒಂದು ಧರ್ಮದ ಸ್ವತ್ತಲ್ಲ. ಬದಲಾಗಿ ಬಹುತ್ವ ಸಂಸ್ಕೃತಿ ದೇಶ. ಮತಾಂಧತೆಯಿಂದ ಹೊರಬಂದು ದೇಶ ಕಟ್ಟಬೇಕು. ರಾಜಕೀಯ ಲಾಭಕ್ಕಾಗಿ ನಡೆಯುವ ಪ್ರಯತ್ನಗಳಿಗೆ ಕಿವಿಗೊಡಬಾರದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.