ADVERTISEMENT

ವಹ್ನಿಕುಲ ಕ್ಷತ್ರಿಯ: ಹೇಳಿಕೆ ಹಿಂಪಡೆಯಲು ಶಾಸಕಿ ಶಾರದಾ ಪೂರ್‍ಯಾನಾಯ್ಕಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 14:30 IST
Last Updated 20 ಡಿಸೆಂಬರ್ 2025, 14:30 IST
ಶಾರದಾ ಪೂರ್‍ಯಾನಾಯ್ಕ
ಶಾರದಾ ಪೂರ್‍ಯಾನಾಯ್ಕ   

ಬೆಂಗಳೂರು: ‘ಗೌಂಡರ್ ಹಾಗೂ ವಹ್ನಿಕುಲ ಕ್ಷತ್ರಿಯ ಜಾತಿಗಳನ್ನು ಪ್ರತ್ಯೇಕ ಮಾಡಬೇಕು ಎಂಬ ಶಾಸಕಿ ಶಾರದಾ ಪೂರ್‍ಯಾನಾಯ್ಕ ಅವರ ಹೇಳಿಕೆ ಖಂಡನೀಯ’ ಎಂದು ಧರ್ಮರಾಜ ಎಜುಕೇಷನಲ್ ಆ್ಯಂಡ್‌ ಕಲ್ಚರಲ್ ಟ್ರಸ್ಟ್‌ ತಿಳಿಸಿದೆ.

‘ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ ತಿಗಳ ಕ್ಷತ್ರಿಯ ಗುಂಪಿನಲ್ಲಿ ಬರುವ ಶಂಭುಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ಗೌಂಡರ್‌ ಹಾಗೂ ವಹ್ನಿಕುಲ ಕ್ಷತ್ರಿಯ ಉಪ ಜಾತಿಗಳನ್ನು ಒಡೆಯುವಂತಹ ಹೇಳಿಕೆ ನೀಡಿರುವ ಶಾರದಾ ಅವರ ನಡೆ ಖಂಡನೀಯ. ಅವರು ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಅವರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಗೀವಿಂದರಾಜು ಎಂ. ಸಾರಕ್ಕಿ ತಿಳಿಸಿದ್ದಾರೆ. 

‘ಹಿಂದುಳಿದ ವರ್ಗಗಳ ಒಳ ಮೀಸಲಾತಿಯಲ್ಲಿ ಗೌಂಡರ್‌ ಹಾಗೂ ವಹ್ನಿಕುಲ ಜಾತಿಗಳಿಗೆ ಪ್ರತ್ಯೇಕ ಒಳ ಮೀಸಲಾತಿ ನೀಡುವಂತೆ ಹೇಳಿರುವುದು ಸರಿಯಲ್ಲ. ತಿಗಳ ಕ್ಷತ್ರಿಯ ಗುಂಪಿನಲ್ಲಿ ಬರುವ ಉಪ ಜಾತಿಗಳ ಆಂತರಿಕ ವಿಷಯದಲ್ಲಿ ಅನಗತ್ಯವಾಗಿ ಮಾತನಾಡಿರುವುದು ಖಂಡನೀಯ. ನಮ್ಮ ಸಮುದಾಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಉಪ ಜಾತಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿವೆ. ಆದ್ದರಿಂದ ನಮ್ಮ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.