‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅಪಾಯಗಳು’ ವಿಚಾರಸಂಕಿರಣದಲ್ಲಿ ಎ.ಟಿ. ರಾಮಸ್ವಾಮಿ, ಮಹಿಮ ಪಟೇಲ್, ಕೆ. ಅಮರನಾರಾಯಣ, ಡಾ.ಅಂಜನಪ್ಪ ಟಿ.ಎಚ್, ನ್ಯಾ. ಎನ್. ಸಂತೋಷ್ ಹೆಗ್ಡೆ, ಬೇಲಿಮಠ ಶಿವರುದ್ರ ಸ್ವಾಮೀಜಿ, ನ್ಯಾ. ವಿ. ಗೋಪಾಲಗೌಡ, ನಿರ್ಮಲ ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಪಶ್ಚಿಮ ಘಟ್ಟದ ಸಂರಕ್ಷಿತ ಪ್ರದೇಶಗಳಿಂದ ಹಿಂತೆಗೆದುಕೊಳ್ಳಬೇಕು ಎಂಬ ಒಕ್ಕೊರಲ ಧ್ವನಿ ‘ಪರಿಸರಕ್ಕಾಗಿ ನಾವು’ ಸಂಘಟನೆ ಶನಿವಾರ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ಮೂಡಿಬಂತು.
ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಪರಿಸರಕ್ಕೆ ಪೂರಕವಾಗಿ, ಕಾನೂನು ರಕ್ಷಣಾ ನಿಯಮಗಳಡಿ ರೂಪಿಸಬೇಕು. ಭಾರತದ ಹವಾಮಾನ ಮತ್ತು ಇಂಧನ ಗುರಿಗಳನ್ನು ಸ್ಥಳೀಯವಾಗಿ, ವಿಕೇಂದ್ರಿತ ವ್ಯವಸ್ಥೆಯಡಿ ಪರ್ಯಾಯ ಯೋಜನೆಗಳ ಮೂಲಕ ಸಾಧಿಸಬೇಕು ಎಂದು ವಿಚಾರಸಂಕಿರಣದಲ್ಲಿ ನಿರ್ಣಯ ಮಂಡಿಸಲಾಯಿತು.
ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳು ಅಧಿಸೂಚಿತ ವನ್ಯಜೀವಿ ಅಭಯಾರಣ್ಯಗಳ ಒಳಗೆ ಬರುವುದರಿಂದ ಇದು 1972ರ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ 29ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಯೋಜನೆಗಳಿಂದಾಗಿ ಭೂಕುಸಿತವಾಗುವ ಸಾಧ್ಯತೆ ಇದೆ. ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಭಾರತದ ಪ್ರಮುಖ ಸಂಪನ್ಮೂಲ ಮತ್ತು ಜೀವವೈವಿಧ್ಯ ತಾಣಗಳಿಗೆ ಯೋಜನೆಯಿಂದ ಹಾನಿಯಾಗಲಿದೆ ಎಂದು ತಜ್ಞರು ಎಚ್ಚರಿಸಿದರು.
ನವೀಕರಿಸಬಹುದಾದ ಇಂಧನ ಯೋಜನೆಗಳು ದೇಶದ ಅಭಿವೃದ್ಧಿಗೆ ಅಗತ್ಯ. ಆದರೆ, ಈ ಹೆಸರಲ್ಲಿ ಪ್ರಸ್ತಾವವಾಗುತ್ತಿರುವ ಯೋಜನೆಗಳು ಪರಿಸರಕ್ಕೆ ಪೂರಕವಾಗಿಲ್ಲ. ಸುಸ್ಥಿರವಾಗಿಯೂ ಇಲ್ಲ. ಕಾಡು, ನದಿ, ವನ್ಯಜೀವಿಗಳಿಗೆ ಧಕ್ಕೆ ತರುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿದರು.
ವಿದ್ಯುತ್ ಮತ್ತು ಹವಾಮಾನ ನೀತಿ ವಿಶ್ಲೇಷಕ ಶಂಕರ್ ಶರ್ಮಾ, ಪರಿಸರವಾದಿ ಅಖಿಲೇಶ್ ಚಿಪ್ಲಿ, ‘ಮಲ್ನಾಡ್ ಮ್ಯಾಪಿಂಗ್’ ಸಂಶೋಧಕಿ ನಿರ್ಮಲ ಗೌಡ ವಿಚಾರ ಮಂಡಿಸಿದರು.
ಬೇಲಿಮಠದ ಶಿವರುದ್ರ ಸ್ವಾಮೀಜಿ, ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನದ ನಿಜಲಿಂಗೇಶ್ವರ ಸ್ವಾಮೀಜಿ, ಸಾಮಾಜಿಕ ಹೋರಾಟಗಾರ ಇಂದೂಧರ ಹೊನ್ನಾಪುರ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಸಹಿತ ಅನೇಕರು ಯೋಜನೆಯ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ಮಾತನಾಡಿದರು.
ಪರಿಸರ ಮತ್ತು ಕಾನೂನಿನ ಅನ್ವಯ ಈ ಯೋಜನೆಗಳು ತಪ್ಪಾಗಿವೆ. ಇದನ್ನು ಸರಿಪಡಿಸದೇ ಇದ್ದರೆ ಮುಂದೆ ಅನಾಹುತಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ವಿರುದ್ಧದ ಹೋರಾಟದಲ್ಲಿ ನಾನು ಭಾಗಿಯಾಗಿದ್ದೇನೆ.ನ್ಯಾ. ಸಂತೋಷ್ ಎನ್. ಹೆಗ್ಡೆ, ವಿಶ್ರಾಂತ ಲೋಕಾಯುಕ್ತ
ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಿ ಎಂದು ನಿಮ್ಮನ್ನು ಜನರು ಆಯ್ಕೆ ಮಾಡಿರುವುದು. ಪರಿಸರವನ್ನು ನಾಶ ಮಾಡಲು ನಿಮ್ಮನ್ನು ಆಯ್ಕೆ ಮಾಡಿರುವುದಲ್ಲ. ಸರ್ಕಾರ ಸರಿದಾರಿಗೆ ಬಾರದೇ ಇದ್ದರೆ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವುದು ಸೇರಿದಂತೆ ಎಲ್ಲ ಕಾನೂನು ಹೋರಾಟಗಳೊಂದಿಗೆ ನಾನಿದ್ದೇನೆ.ನ್ಯಾ. ವಿ. ಗೋಪಾಲಗೌಡ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಪಶ್ಚಿಮ ಘಟ್ಟದ ಹೃದಯವನ್ನು ಸರ್ಕಾರ ಬಗೆಯುತ್ತಿದೆ. ಪರಿಸರಕ್ಕಿಂತ ಚುನಾವಣಾ ರಾಜಕೀಯವೇ ಮುಖ್ಯವಾಗಿದೆ. ವಿವೇಕವಂತ ವಿಚಾರವಂತ ಬುದ್ಧಿವಂತ ಜನರಿಂದಲೇ ಪ್ರಕೃತಿಗೆ ತೊಂದರೆ ಒದಗಿಬಂದಿದೆ. ಇದನ್ನು ತಡೆಯಬೇಕಿದೆ.ಎ.ಟಿ. ರಾಮಸ್ವಾಮಿ ಅಧ್ಯಕ್ಷ ‘ಪರಿಸರಕ್ಕಾಗಿ ನಾವು’ ಸಂಘಟನೆ
ಪಶ್ಚಿಮಘಟ್ಟದಲ್ಲಿ ಟಿಂಬರ್ ಮಾಫಿಯಾವೇ ಎಲ್ಲ ಯೋಜನೆಗಳ ಹಿಂದೆ ಕೆಲಸ ಮಾಡುತ್ತಿದೆ. ಈ ಮಾಫಿಯಾಕ್ಕೆ ಅನುಕೂಲ ಮಾಡಿಕೊಳ್ಳಲು ಬೇರೆ ಬೇರೆ ಹೆಸರಲ್ಲಿ ಸರ್ಕಾರ ಯೋಜನೆಯನ್ನು ಹಾಕಿಕೊಳ್ಳುತ್ತದೆ.ಕೆ. ಅಮರನಾರಾಯಣ ನಿವೃತ್ತ ಐಎಎಸ್ ಅಧಿಕಾರಿ