ADVERTISEMENT

ಮನ್ಸೂರ್‌ಖಾನ್‌ ಷೇರು ಜಪ್ತಿಗೆ ಕ್ರಮ

5 ಲಕ್ಷ ಷೇರುಗಳ ಮುಟ್ಟುಗೋಲಿಗೆ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 21:36 IST
Last Updated 24 ಜೂನ್ 2020, 21:36 IST
ಮನ್ಸೂರ್‌ ಖಾನ್‌
ಮನ್ಸೂರ್‌ ಖಾನ್‌   

ಬೆಂಗಳೂರು: ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ಸಂಸ್ಥಾಪಕ ಮೊಹಮ್ಮದ್‌ ಮನ್ಸೂರ್‌ ಖಾನ್ ಖರೀದಿಸಿರುವ ಮುಂಬೈನ ‘ಪೆಂಟಾಡ್‌ ಕಮಾಡಿಟಿಸ್‌ ಪ್ರೈವೇಟ್‌ ಲಿ’. ಕಂಪನಿಯ 5 ಲಕ್ಷ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವಿವಿಧ ಕಂಪನಿಗಳಲ್ಲಿ ಮನ್ಸೂರ್‌ ಖಾನ್‌ ಒಡೆತನದ ಐಎಂಎ ಹೊಂದಿರುವ ಷೇರುಗಳ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಸಂಗ್ರಹಿಸುತ್ತಿದೆ. ಸದ್ಯ ಸರ್ಕಾರಕ್ಕೆ ಪೆಂಟಾಡ್‌ ಕಮಾಡಿಟಿಸ್‌ ಷೇರಿನ ಮಾಹಿತಿ ಲಭ್ಯವಾಗಿದ್ದು ಇವುಗಳ ಮುಟ್ಟುಗೋಲಿಗೆ ಕಂದಾಯಇಲಾಖೆಯು ಆರ್ಥಿಕ ಇಲಾಖೆ ಸಲಹೆ ಪಡೆದಿದ್ದು, ಪ್ರಕ್ರಿಯೆ ಆರಂಭಿಸಿದೆ ಎಂದು ಮೂಲಗಳುತಿಳಿಸಿವೆ.

ಪೆಂಟಾಡ್‌ ಕಮಾಡಿಟಿಸ್‌ ಕಂಪನಿಯ 5 ಲಕ್ಷ ಷೇರುಗಳನ್ನು ಐಎಂಎ ₹ 10 ಮುಖಬೆಲೆಗೆ ಖರೀದಿಸಿತ್ತು. ಈಗ ಪ್ರತಿ ಷೇರಿನ ದರ ₹ 3.31ಕ್ಕೆ ಕುಸಿದಿದೆ. ಬೆಲೆ ಮತ್ತಷ್ಟು ಕುಸಿಯುವ ಮುನ್ನ ಮುಟ್ಟುಗೋಲು ಹಾಕಿಕೊಂಡು ಮಾರುವ ಉದ್ದೇಶ ಸರ್ಕಾರಕ್ಕಿದೆ. ಅಲ್ಲದೆ, ಈ ಷೇರುಗಳನ್ನು ಆರೋಪಿ ಮಾರಾಟ ಮಾಡುವ ಸಾಧ್ಯತೆಯಿದೆ. ತಕ್ಷಣ ಕ್ರಮ ಆರಂಭಿಸಬೇಕು ಎಂದು ಕಂದಾಯ ಇಲಾಖೆ ಹೇಳಿದೆ.

ADVERTISEMENT

‘ಐಎಂಎ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಭೂಕಂದಾಯ ಕಾಯ್ದೆಯನ್ವಯ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬಹುದು’ ಎಂದು ಆರ್ಥಿಕ ಇಲಾಖೆ ಸಲಹೆ ನೀಡಿದೆ ಎಂದೂ ಮೂಲಗಳು ಹೇಳಿವೆ.

ಪೆಂಟಾಡ್‌ ಕಮಾಡಿಟಿಸ್‌ ಹಣಕಾಸು, ವಿಮೆ ಹಾಗೂ ಪಿಂಚಣಿಗೆ ಆರ್ಥಿಕ ನೆರವು ನೀಡುವ ಚಟುವಟಿಕೆ ನಡೆಸುತ್ತಿದ್ದು, ಮೂರು ವರ್ಷಗಳ ಹಿಂದೆ ಆರಂಭವಾಗಿದೆ. ಮನ್ಸೂರ್‌ ಖಾನ್‌ ಇದರ ನಿರ್ದೇಶಕ. ಉಳಿದಂತೆ ಬೇರೆ ನಿರ್ದೇಶಕರೂ ಇದ್ದಾರೆ.

ಹೂಡಿಕೆದಾರರ ಹಣವನ್ನು ಬೇರೆ ಬೇರೆ ವ್ಯವಹಾರಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿ ವಂಚಿಸಿರುವ ಆರೋಪಕ್ಕೊಳಗಾಗಿರುವ ಐಎಂಎ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ. ರಾಜ್ಯ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯ ₹ 400 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಜಪ್ತಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.