ADVERTISEMENT

ಜೋಪಡಿ ನೆಲಸಮ: ಮಾಹಿತಿ ನೀಡಿ

ಸರ್ಕಾರಕ್ಕೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 10:38 IST
Last Updated 23 ಜನವರಿ 2020, 10:38 IST
ಕಾರ್ಮಿಕರ ಜೋಪಡಿಗಳನ್ನು ಅನಧಿಕೃತವಾಗಿ ತೆರವುಗೊಳಿಸಿದ ಸ್ಥಳಕ್ಕೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಬಸವರಾಜು (ಮಧ್ಯ) ಮತ್ತು ಜಿಲ್ಲಾ ಸದಸ್ಯ ಕಾರ್ಯದರ್ಶಿ ಎ.ಸೋಮಶೇಖರ (ಬಲತುದಿಯಲ್ಲಿ ಕೊನೆಯವರು) ಅವರು ಮಂಗಳವಾರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಕಾರ್ಮಿಕರ ಜೋಪಡಿಗಳನ್ನು ಅನಧಿಕೃತವಾಗಿ ತೆರವುಗೊಳಿಸಿದ ಸ್ಥಳಕ್ಕೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಬಸವರಾಜು (ಮಧ್ಯ) ಮತ್ತು ಜಿಲ್ಲಾ ಸದಸ್ಯ ಕಾರ್ಯದರ್ಶಿ ಎ.ಸೋಮಶೇಖರ (ಬಲತುದಿಯಲ್ಲಿ ಕೊನೆಯವರು) ಅವರು ಮಂಗಳವಾರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.   

ಬೆಂಗಳೂರು: ‘ನಗರದ ಹೊರವಲಯದ ಮಾರತಹಳ್ಳಿ, ಕರಿಯಮ್ಮನ ಅಗ್ರಹಾರ, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ಬೆಳ್ಳಂದೂರು, ವರ್ತೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟಡ ಕಾರ್ಮಿಕರ ಜೋಪಡಿಗಳನ್ನು ಏಕಾಏಕಿ ನೆಲಸಮ ಮಾಡಿರುವ ಕುರಿತಂತೆ 24 ಗಂಟೆಗಳಲ್ಲಿ ಮಾಹಿತಿ ನೀಡಿ’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ರಾಜ್ಯ ಸರ್ಕಾರಕ್ಕೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶಿಸಿದೆ.

ಜೋಪಡಿ ನೆಲಸಮ ಕುರಿತಂತೆ ‘ಪ್ರಜಾವಾಣಿ’ ಪತ್ರಿಕೆಯ ವರದಿ ಆಧರಿಸಿ ಹೈಕೋರ್ಟ್‌ ನ್ಯಾಯಮೂರ್ತಿ ರವಿ ಮಳಿಮಠ ಅವರ ನಿರ್ದೇಶನದಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಬಸವರಾಜು ಹಾಗೂ ಬೆಂಗಳೂರು ನಗರ ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಎ.ಸೋಮಶೇಖರ ಅವರು ಮಂಗಳವಾರ ಸಂಜೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ನಂತರ 'ಪ್ರಜಾವಾಣಿ' ಜೊತೆ ಮಾತನಾಡಿದ ಜಿ.ಬಸವರಾಜು ಅವರು, ‘ತೆರವುಗೊಳಿಸಲಾದ ಪ್ರದೇಶದಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಜನರು ಇದ್ದುದು ಗೊತ್ತಾಗಿದೆ. ಇವರಲ್ಲಿ ಕೆಲವರು ಬಾಡಿಗೆ ನೀಡುತ್ತಿದ್ದರು ಇನ್ನೂ ಕೆಲವರು ಪುಕ್ಕಟೆಯಾಗಿ ಜೀವನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸರ್ವೇ ನಂಬರ್ 34/2ರಲ್ಲಿ ಸುಮಾರು 150 ಜೋಪಡಿಗಳನ್ನು ಕೆಡವಲಾಗಿದೆ. ಆದಾಗ್ಯೂ ಈ ಕುರಿತ ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಬೇಕಿದೆ’ ಎಂದರು.

ADVERTISEMENT

‘ನೊಂದವರು ಯಾರೂ ನಮಗೆ ದೂರು ನೀಡಿಲ್ಲ. ಅಂತಹವರು ಮುಂದೆ ಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಸ್ಥಳದಲ್ಲಿ ವಾಸ ಮಾಡುತ್ತಿರುವವರಿಗೆ ಯಾವುದೇ ನಾಗರಿಕ ಸೌಲಭ್ಯಗಳು ಇಲ್ಲದಿರುವುದೂ ಕಂಡು ಬಂದಿದೆ’ ಎಂದರು. ‘ಬಿಬಿಎಂಪಿ ಆಯುಕ್ತರು, ರಾಜ್ಯ ಕಾನೂನು ಮತ್ತು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಉತ್ತರ ನೀಡಲು ಸೂಚಿಸಿ’ ಪತ್ರ ಬರೆಯಲಾಗಿದೆ. ‘ಈ ಜಾಗ ಖಾಸಗಿಯವರದ್ದೊ, ಸರ್ಕಾರದ್ದೋ, ಜೋಪಡಿಗಳಲ್ಲಿದ್ದ ಮಹಿಳೆಯರು ಮತ್ತು ಮಕ್ಕಳಿಗೆ ಯಾವ ರೀತಿಯ ರಕ್ಷಣೆ ಒದಗಿಸಿದ್ದೀರಿ ಎಂದು ಕೇಳಲಾಗಿದೆ’ ಎಂದು ಬಸವರಾಜು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.